ಮಂಗಳೂರು : ಹೈಡ್ರೊವೀಡ್ ಗಾಂಜಾ ಮಾದಕ ದ್ರವ್ಯವನ್ನು ಮಾರಾಟಕ್ಕೆ ಸಾಗಾಟ ಮಾಡುತ್ತಿದ್ದ ಆರೋಪಿತೆಯನ್ನು ಮುಲ್ಕಿ ಪೊಲೀಸರು ಬಂಧಿಸಿ, ಸುಮಾರು ₹35 ಲಕ್ಷ ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವೀಡ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿತೆಯನ್ನು ಸುಹಾನಾ (21) ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿಯಾಗಿದ್ದು, ಪ್ರಸ್ತುತ ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ BCA ವ್ಯಾಸಂಗ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೇ 12ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಆರೋಪಿತೆ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ವೇಳೆ ಪಣಂಬೂರು ACP ತಂಡ ಹಾಗೂ ಮುಲ್ಕಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪಿತೆಯ ಬಳಿಯಿಂದ ಸುಮಾರು ₹35 ಲಕ್ಷ ಮೌಲ್ಯದ ಹೈಡ್ರೊವೀಡ್ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿತೆ ಚೆನ್ನೈನಿಂದ ಮಾದಕ ವಸ್ತು ತಂದು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದಳು ಎಂಬ ಮಾಹಿತಿ ಬಹಿರಂಗವಾಗಿದೆ.
ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 32/2026ರಡಿ NDPS ಕಾಯ್ದೆಯ ಕಲಂ 8(C), 20(B) ಅನ್ವಯ ಪ್ರಕರಣ ದಾಖಲಾಗಿದೆ.ಆರೋಪಿತೆಯ ವಿರುದ್ಧ ಈಗಾಗಲೇ ಈ ಕೆಳಗಿನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾವೂರು ಪೊಲೀಸ್ ಠಾಣೆ ಅ.ಕ್ರ. 37/2026 – NDPS Act ಕಲಂ 8(C), 22(C) ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ O.R. No: 177/2025-26 – NDPS Act ಕಲಂ 20(b), 22(B), 23(b), 27(A) ಹಾಗೂ 29 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


