ಶಿವಮೊಗ್ಗ : ಪ್ರವಾಸಕ್ಕೆಂದು ಕೊಡಚಾದ್ರಿ ಬೆಟ್ಟಕ್ಕೆ ತೆರಳಿದ್ದ ಪ್ರವಾಸಿಗರೊಬ್ಬರು ತಲೆಸುತ್ತು ಬಂದು ಆಯತಪ್ಪಿ ಸುಮಾರು 60 ಅಡಿ ಆಳದ ಕಂದಕಕ್ಕೆ ಜಾರಿಬಿದ್ದು ಗಾಯಗೊಂಡಿರುವ ಘಟನೆ ಹೊಸನಗರ ತಾಲೂಕಿನ ಕೊಡಚಾದ್ರಿಯಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಪ್ರದೀಪ್ ಗಾಯಗೊಂಡ ಪ್ರವಾಸಿಗ. ಕುಟುಂಬದೊಂದಿಗೆ ಕೊಡಚಾದ್ರಿ ಪ್ರವಾಸಕ್ಕೆ ಆಗಮಿಸಿದ್ದ ಅವರು, ಸರ್ವಜ್ಞ ಪೀಠ (ಶಂಕರಾಚಾರ್ಯ ಪೀಠ)ದತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ತಲೆಸುತ್ತು ಬಂದ ಪರಿಣಾಮ ಆಯತಪ್ಪಿ ಕಂದಕಕ್ಕೆ ಬಿದ್ದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಜೀಪ್ ಚಾಲಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಹಗ್ಗದ ಸಹಾಯದಿಂದ ಕಂದಕಕ್ಕೆ ಇಳಿದು, ಗಾಯಗೊಂಡಿದ್ದ ಪ್ರದೀಪ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಳಿಕ ಜೀಪ್ನಲ್ಲೇ ಅವರನ್ನು ಬೆಟ್ಟದ ಕೆಳಭಾಗಕ್ಕೆ ಕರೆತಂದು ಕುಟುಂಬಸ್ಥರಿಗೆ ನೆರವಾಗಿದ್ದಾರೆ.
ಆದರೆ ಗಾಯಗೊಂಡ ಪ್ರವಾಸಿಗರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Kit) ಲಭ್ಯವಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪರದಾಡುವಂತಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಕನಿಷ್ಠ ಮೂಲಸೌಕರ್ಯಗಳನ್ನೂ ಒದಗಿಸದಿರುವುದಕ್ಕೆ ಕುಟುಂಬಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದ ಬಳಿಕ ‘ನಗರ’ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಾಳುವನ್ನು ಬಳಿಕ ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಜೀಪ್ ಚಾಲಕರ ಸಮಯಪ್ರಜ್ಞೆ ಹಾಗೂ ತಕ್ಷಣದ ರಕ್ಷಣಾ ಕಾರ್ಯಾಚರಣೆಯಿಂದ ಪ್ರವಾಸಿಗನ ಜೀವ ಉಳಿದಿದೆ.
ಕೊಡಚಾದ್ರಿಯಂತಹ ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಅಗತ್ಯ ಮೂಲಸೌಕರ್ಯ, ಪ್ರಥಮ ಚಿಕಿತ್ಸಾ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

