ಕಡಬ : ತಾಲೂಕಿನ ಕೋಲ್ಪೆ ಗ್ರಾಮದಲ್ಲಿ ಆಗಸ್ಟ್ 12ರಂದು ನಡೆದಿರುವ ಅನೈತಿಕ ಪೊಲೀಸ್ಗಿರಿ ಆರೋಪದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಹಾಗೂ ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಸಂತ್ರಸ್ತ ಯುವತಿ ಆಸ್ಪತ್ರೆಯಿಂದಲೇ ವಿಡಿಯೋ ಹಂಚಿಕೊಂಡಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆ ನಡೆದಿದ್ದು ಹೇಗೆ?
ಕೋಲ್ಪೆ ನಿವಾಸಿ ಫಾಯಿಝಾ (18) ಮೆಲ್ಕಾರ್ನಲ್ಲಿ ಕೆಲಸ ಮಾಡುತ್ತಿದ್ದು, ಆಗಸ್ಟ್ 12ರಂದು ರಾತ್ರಿ ಕೆಲಸ ಮುಗಿಸಿ ಅಂಗಡಿ ಮಾಲೀಕ ಝಾಹಿರ್ ಅವರ ಗೆಳೆಯ ಸಿಪ್ಪಾನ್ ಅವರ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಅವರೊಂದಿಗೆ ಸಿಪ್ಪಾನ್ ಹಾಗೂ ಝಾಹಿರ್ ಅವರ ತಾಯಿ ಸಫಿಯಾ ಕೂಡ ಇದ್ದರು. ಕೋಲ್ಪೆ ಬಳಿ ರಾತ್ರಿ ಸುಮಾರು 11 ಗಂಟೆ ವೇಳೆಗೆ 5–6 ಮಂದಿಯ ಗುಂಪು ಕಾರು ಹಾಗೂ ಸ್ಕೂಟರ್ ತಡೆದು ಗಲಾಟೆ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಫಾಯಿಝಾ ಮೇಲೆ ಹಲ್ಲೆ ನಡೆಸಿ, ಕಪಾಳಕ್ಕೆ ಹೊಡೆದು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಜಗಳ ಬಿಡಿಸಲು ಬಂದ ಜಮಾಲ್ ಅವರಿಗೂ ಹಲ್ಲೆ ನಡೆಸಿ ದೂಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಂಶಿಕ್, ಸಂಶುದ್ದೀನ್, ಜಾಫರ್ ಹಾಗೂ ಜಾಬೀರ್ ಸೇರಿದಂತೆ ಕೆಲವರು ಫಾಯಿಝಾರನ್ನು ತಳ್ಳಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಜ್ಞೆ ತಪ್ಪಿ ಬಿದ್ದಿದ್ದ ಅಕ್ಕನನ್ನು ಎತ್ತಲು ಬಂದ ಆಕೆಯ ತಂಗಿ ಫಾಸಿಲಾ ಅವರಿಗೂ ಸಿದ್ದೀಕ್ ಕಪಾಳಕ್ಕೆ ಹೊಡೆದು ದೂಡಿದ್ದಾರೆ ಎಂದು ಆರೋಪಿಸಲಾಗಿದೆ.
ಆಸ್ಪತ್ರೆಯಿಂದಲೇ ವಿಡಿಯೋ ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಅಲ್ಲಿಂದಲೇ ವಿಡಿಯೋ ಹಂಚಿಕೊಂಡು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ BNS 115(2), 126(2), 189(2), 190, 191(2), 351(2), 352 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜಾಬೀರ್, ಸಿದ್ದೀಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು @ ಅಶ್ರಫ್ ಹಾಗೂ ಅಶ್ರಫ್ ಕೋಲ್ಪೆ ವಿರುದ್ಧ ಎಫ್ಐಆರ್ ದಾಖಲಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

