ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ದುಃಖದ ಸುದ್ದಿ ಎದುರಾಗಿದೆ. ಕನ್ನಡ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಇಂದು ಬೆಳಗಿನ ಜಾವ ಏಕಾಏಕಿ ಹೃದಯಾಘಾತವಾಗಿದ್ದು, ಮನೆಯಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪ್ರಸ್ತುತ ಅವರ ಪಾರ್ಥಿವ ಶರೀರವನ್ನು Apollo Hospital ನಲ್ಲಿ ಇರಿಸಲಾಗಿದೆ.
ದಿಲೀಪ್ ರಾಜ್ ಕನ್ನಡ ಸಿನಿಮಾಗಳಲ್ಲಿ ನಾಯಕ, ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು. ಕಿರುತೆರೆಯಲ್ಲಿಯೂ ಅವರು ಜನಪ್ರಿಯರಾಗಿದ್ದು, ವಿಶೇಷವಾಗಿ ‘Hitler Kalyana’ ಧಾರಾವಾಹಿಯಲ್ಲಿ ಅಭಿನಯದ ಮೂಲಕ ಮನೆಮಾತಾಗಿದ್ದರು.
ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ದಿಲೀಪ್ ರಾಜ್, ಎರಡು ಧಾರಾವಾಹಿಗಳ ನಿರ್ಮಾಣ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಹಾಗೂ ಆಪ್ತರು ಸಂತಾಪ ಸೂಚಿಸಿದ್ದಾರೆ.


