ಮಂಗಳೂರು : ಕರ್ನಾಟಕದ ಇಂಧನ ಮೂಲಸೌಕರ್ಯಕ್ಕೆ ಮತ್ತಷ್ಟು ಬಲ ತುಂಬುವ ಎರಡು ಮಹತ್ವದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ.
ಮಂಗಳೂರಿನ ಎಚ್ಪಿಸಿಎಲ್ ಘಟಕದ ಆವರಣದಲ್ಲಿ ನಿರ್ಮಿಸಲಾಗಿರುವ ದೇಶದ ಅತಿದೊಡ್ಡ ಭೂಗತ ಎಲ್ಪಿಜಿ ಸಂಗ್ರಹಣಾಗಾರ ಹಾಗೂ ಎಂಆರ್ಪಿಎಲ್ನ ಬೆಂಗಳೂರಿನ ದೇವನಗೊಂತಿ ಅತ್ಯಾಧುನಿಕ ಮಾರ್ಕೆಟಿಂಗ್ ಟರ್ಮಿನಲ್ ಅನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ.
ದೇವನಗೊಂತಿಯಲ್ಲಿ ₹330 ಕೋಟಿ ವೆಚ್ಚದ ಟರ್ಮಿನಲ್
ಬೆಂಗಳೂರಿನ ದೇವನಗೊಂತಿಯಲ್ಲಿ ಸುಮಾರು ₹330 ಕೋಟಿ ವೆಚ್ಚದಲ್ಲಿ 20 ಎಕರೆ ಪ್ರದೇಶದಲ್ಲಿ ಈ ಅತ್ಯಾಧುನಿಕ ಮಾರ್ಕೆಟಿಂಗ್ ಟರ್ಮಿನಲ್ ನಿರ್ಮಿಸಲಾಗಿದೆ. ಮಂಗಳೂರಿನ ಎಂಆರ್ಪಿಎಲ್ ರಿಫೈನರಿಯನ್ನು 363 ಕಿ.ಮೀ. ಉದ್ದದ ಪೆಟ್ರೋನೆಟ್ ಮಂಗಳೂರು–ಹಾಸನ–ಬೆಂಗಳೂರು ಪೈಪ್ಲೈನ್ ಮೂಲಕ ಸಂಪರ್ಕಿಸುವ ಈ ಟರ್ಮಿನಲ್ 77 ಸಾವಿರ ಕಿಲೋಲೀಟರ್ ಸಂಗ್ರಹ ಸಾಮರ್ಥ್ಯ ಹೊಂದಿದೆ.
ಇಲ್ಲಿ ಡೀಸೆಲ್, ಪೆಟ್ರೋಲ್ ಹಾಗೂ ಏವಿಯೇಷನ್ ಟರ್ಬೈನ್ ಫ್ಯುಯೆಲ್ ಸೇರಿದಂತೆ ವಿವಿಧ ಇಂಧನಗಳನ್ನು ಸಂಗ್ರಹಿಸಿ ವಿತರಣೆ ಮಾಡಲಾಗುತ್ತದೆ. ಇದರಿಂದ ಕರ್ನಾಟಕದ ಇಂಧನ ಪೂರೈಕೆ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ.
₹890 ಕೋಟಿ ವೆಚ್ಚದಲ್ಲಿ ಭೂಗತ ಎಲ್ಪಿಜಿ ಸಂಗ್ರಹಣಾಗಾರ
ಮಂಗಳೂರಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಘಟಕದ ಆವರಣದಲ್ಲಿ ಸುಮಾರು ₹890 ಕೋಟಿ ವೆಚ್ಚದಲ್ಲಿ 80 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಭೂಗತ ಎಲ್ಪಿಜಿ ಸಂಗ್ರಹಣಾಗಾರ ನಿರ್ಮಿಸಲಾಗಿದೆ.
ನೆಲಮಟ್ಟದಿಂದ ಸುಮಾರು 500 ಅಡಿ ಆಳದ ಬಂಡೆಪದರದಲ್ಲಿ ನಿರ್ಮಿಸಲಾಗಿರುವ ಈ ಸಂಗ್ರಹಣಾಗಾರದಲ್ಲಿ ಪ್ರೊಪೇನ್ ಮತ್ತು ಬ್ಯುಟೇನ್ ಅನಿಲವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆಯಿದೆ.
ಮೇಘಾ ಎಂಜಿನಿಯರಿಂಗ್ ಸಂಸ್ಥೆ ಈ ಯೋಜನೆಯನ್ನು ನಿರ್ಮಿಸಿದ್ದು, ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ತಾಂತ್ರಿಕ ನಿರ್ವಹಣೆ ಮಾಡಿದೆ.
ನವಮಂಗಳೂರು ಬಂದರಿಗೆ ಹಡಗುಗಳ ಮೂಲಕ ಆಮದಾಗುವ ಎಲ್ಪಿಜಿಯನ್ನು ಪೈಪ್ಲೈನ್ ಮೂಲಕ ಸಂಗ್ರಹಣಾಗಾರಕ್ಕೆ ಸಾಗಿಸಲಾಗುತ್ತದೆ. ಇಲ್ಲಿಂದ ಮಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಅಡುಗೆ ಅನಿಲ ಪೂರೈಕೆ ಮಾಡಲು ಸಾಧ್ಯವಾಗಲಿದೆ.
ಅಂತಾರಾಷ್ಟ್ರೀಯ ಸಂಘರ್ಷ, ಯುದ್ಧ ಹಾಗೂ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಸಂದರ್ಭದಲ್ಲಿಯೂ ಅಡುಗೆ ಅನಿಲದ ಕೊರತೆಯಾಗದಂತೆ ತಡೆಯಲು ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ.
ಕರ್ನಾಟಕದ ಇಂಧನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ
ಈ ಎರಡೂ ಯೋಜನೆಗಳು ಇಂಧನ ಸಂಗ್ರಹಣೆ, ಸುರಕ್ಷಿತ ಪೂರೈಕೆ ಹಾಗೂ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಕೈಗಾರಿಕಾ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೂ ನೆರವಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಇಂದು ನಡೆಯಲಿರುವ ಲೋಕಾರ್ಪಣೆ ಕಾರ್ಯಕ್ರಮವು ಕರ್ನಾಟಕದ ಇಂಧನ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.

