ಮಂಗಳೂರು : ಕರಾವಳಿಯ ಖ್ಯಾತ ಹಾಸ್ಯ ಕಲಾವಿದರ ದಂಡನ್ನೇ ಒಳಗೊಂಡಿರುವ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ‘ವಾದಿರಾಜ ವಾಲಗ ಮಂಡಳಿ’ (VVM) ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಡಿಸೆಂಬರ್ ತಿಂಗಳ ಕೊನೆಯಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.


ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಈ ಮೂಲಕ ಚಿತ್ರದ ಮೊದಲ ನೋಟವನ್ನು ಸಿನಿಪ್ರಿಯರಿಗೆ ಪರಿಚಯಿಸಲಾಯಿತು. ಈಗಾಗಲೇ ‘ಗಲಾಟೆ’ ಸಿನಿಮಾ ಹಾಗೂ ‘ಜೋಗುಳ’ ಧಾರಾವಾಹಿ ನಿರ್ಮಿಸಿರುವ ಸಂಸ್ಥೆ ಇದೀಗ ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ.
ಬ್ರಹ್ಮಾವರ, ಮಂಗಳೂರು, ಮುಲ್ಕಿ ಹಾಗೂ ಕಾಸರಗೋಡು ಸೇರಿದಂತೆ ಕರಾವಳಿಯ ವಿವಿಧ ಭಾಗಗಳಲ್ಲಿ ಎರಡು ಹಂತಗಳಲ್ಲಿ ಸುಮಾರು 55 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕರಾವಳಿ ಕನ್ನಡದ ಸೊಗಡು, ಸ್ಥಳೀಯ ಸಂಭಾಷಣಾ ಶೈಲಿ ಹಾಗೂ ಹಾಸ್ಯಮಯ ಕಥಾಹಂದರ ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ. ಕುಟುಂಬ ಸಮೇತ ಕುಳಿತು ವೀಕ್ಷಿಸಬಹುದಾದ ಮನರಂಜನಾತ್ಮಕ ಚಿತ್ರವಾಗಿ ಇದನ್ನು ರೂಪಿಸಲಾಗಿದೆ.
ಖ್ಯಾತ ಕಲಾವಿದರ ದಂಡು
ಚಿತ್ರದಲ್ಲಿ ಗುಂಡುಮಾಮ ಖ್ಯಾತಿಯ ನವೀನ್ ಡಿ. ಪಡೀಲ್, ‘ಸು ಫ್ರಮ್ ಸೊ’ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು ಹಾಗೂ ಲಕ್ಷ್ಮಣ ಮಲ್ಲೂರು ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.
ಅರ್ಜುನ್ ವೇದಾಂತ್ ಹಾಗೂ ಅಥರ್ವ ಪ್ರಕಾಶ್ ನಾಯಕ ನಟರಾಗಿ, ತನ್ವಿ ರಾವ್ ಹಾಗೂ ವೇನ್ಯ ರೈ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಅನುಭವಿಗಳ ತಂಡ
ಅನುಭವಿ ಛಾಯಾಗ್ರಾಹಕ ಚೆನ್ನೈ ಮೂಲದ ಎಸ್. ಚಂದ್ರಶೇಖರನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದು, ಸ್ಟಂಟ್ ಶಿವು ಸಾಹಸ ನಿರ್ದೇಶನ ಹಾಗೂ ವಿನಾಯಕ ಆಚಾರ್ಯ ನೃತ್ಯ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದ್ದಾರೆ.
‘ವರಾಹ ರೂಪಂ’ ಹಾಡಿನ ಮೂಲಕ ಖ್ಯಾತಿ ಪಡೆದಿರುವ ನಟ, ನಿರ್ದೇಶಕ ಹಾಗೂ ಸಾಹಿತಿ ಶಶಿರಾಜ್ ಕಾವೂರು ಚಿತ್ರದ ಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಜಯಪ್ರಕಾಶ್ ತುಂಬೆ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಸಂತೋಷ್ ಶೆಟ್ಟಿ ಹಾಗೂ ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ, ರಾಜೇಶ್ ಕುಡ್ಲ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಖ್ಯಾತ ಕಲಾವಿದ ದೇವಿ ಚಿತ್ರದ ಪೋಸ್ಟರ್ ವಿನ್ಯಾಸಗೊಳಿಸಿದ್ದಾರೆ.
ಒಂಬತ್ತು ಹಾಡುಗಳ ಸಂಗೀತಮಯ ಸಿನಿಮಾ
‘ವಾದಿರಾಜ ವಾಲಗ ಮಂಡಳಿ’ ಚಿತ್ರದಲ್ಲಿ ಒಟ್ಟು ಒಂಬತ್ತು ಹಾಡುಗಳಿದ್ದು, ಐದು ಪೂರ್ಣ ಪ್ರಮಾಣದ ಹಾಡುಗಳು ಹಾಗೂ ನಾಲ್ಕು ತುಣುಕು ಹಾಡುಗಳು ಇರಲಿವೆ.
ಕೆನಡಾ ಮೂಲದ ಅಭಿ ವಿ., ‘ವರಾಹ ರೂಪಂ’ ಹಾಡಿನ ಗಾಯಕ ಚೆನ್ನೈ ಮೂಲದ ಸಾಯಿವಿಘ್ನೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು ಹಾಗೂ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಹಲವು ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಮಲಯಾಳಂ, ತಮಿಳಿಗೂ ಡಬ್ಬಿಂಗ್
ಕರಾವಳಿಯ ಸೊಗಡಿನ ಹಾಸ್ಯ ಮತ್ತು ಕಥಾಹಂದರವನ್ನು ಇತರ ಭಾಷೆಗಳ ಪ್ರೇಕ್ಷಕರಿಗೂ ತಲುಪಿಸುವ ಉದ್ದೇಶದಿಂದ ಚಿತ್ರವನ್ನು ಮಲಯಾಳಂ ಹಾಗೂ ತಮಿಳು ಭಾಷೆಗಳಿಗೆ ಡಬ್ಬಿಂಗ್ ಮಾಡುವ ಕಾರ್ಯವೂ ಪ್ರಗತಿಯಲ್ಲಿದೆ. ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದರೂ, ಇತರ ಸಿನಿಮಾಗಳೊಂದಿಗೆ ಸ್ಪರ್ಧೆ ಎದುರಾಗದಂತೆ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಕಾರ್ಯಕಾರಿ ನಿರ್ಮಾಪಕರಾದ ಲಕ್ಷ್ಮಣ ಮಲ್ಲೂರು, ಸಂತೋಷ್ ಶೆಟ್ಟಿ, ನಿರ್ದೇಶಕ ಶಶಿರಾಜ್ ಕಾವೂರು, ನಟ ನವೀನ್ ಡಿ. ಪಡೀಲ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.
ಕರಾವಳಿಯ ಹಾಸ್ಯ, ಸಂಗೀತ ಹಾಗೂ ಸ್ಥಳೀಯ ಸಂಸ್ಕೃತಿಯ ಸೊಗಡನ್ನು ಒಳಗೊಂಡಿರುವ ‘ವಾದಿರಾಜ ವಾಲಗ ಮಂಡಳಿ’ ಚಿತ್ರವು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

