ಮಂಗಳೂರು : ಅವಿಕಾ ಪ್ರೊಡಕ್ಷನ್ ಹಾಗೂ ಬಿಆರ್‌ಬಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ, ಅರ್ಜುನ್ ದೇವ್ ನಿರ್ದೇಶಿಸಿ, ನಟಿಸಿರುವ ‘ಟಾಸ್’ ತುಳು ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ನಟ ಅರ್ಜುನ್ ದೇವ್ ರವರು ತಿಳಿಸಿದ್ದಾರೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಎರಡು ಹಂತಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.ಸಿನಿಮಾದಲ್ಲಿ ಡಾ. ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಶೋಭರಾಜ್ ಪಾವೂರ್, ಚೈತ್ರಾ ಶೆಟ್ಟಿ ಹಾಗೂ ಕೃತಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ, ಜೋಯೆಲ್ ಶಮನ್ ಡಿ’ಸೋಜಾ ಛಾಯಾಗ್ರಹಣ ಹಾಗೂ ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನ ಮಾಡಿದ್ದಾರೆ. ಸಾಗರ್ ಪೂಜಾರಿ ನಿರ್ಮಾಪಕರಾಗಿದ್ದು, ಸಂದೀಪ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ‘ಟಾಸ್’ ತುಳು ಹಾಗೂ ಕನ್ನಡ ಭಾಷೆಯಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣಗೊಂಡಿದ್ದು, ಎರಡೂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ನಟ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಸಿನಿಮಾಕ್ಕೆ ಸಾಥ್ ನೀಡಿದ್ದಾರೆ.
ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಕರಾವಳಿಯ ವಿವಿಧೆಡೆ ಹಾಗೂ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಕಾಮಿಡಿ ಪ್ರಧಾನವಾಗಿರುವ ‘ಟಾಸ್’ನಲ್ಲಿ ಸೆಂಟಿಮೆಂಟ್, ಆ್ಯಕ್ಷನ್, ಥ್ರಿಲ್ಲರ್ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಪ್ಯಾಕೇಜ್ ನೀಡಲಾಗಿದೆ. ಹಣ ಕೊಟ್ಟು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳನ್ನು ಸಿನಿಮಾದಲ್ಲಿ ನೀಡಲು ಪ್ರಯತ್ನಿಸಲಾಗಿದೆ ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಶರ್ಮಿಳಾ ಕಾಪಿಕಾಡ್,ದೇವದಾಸ್ ಕಾಪಿಕಾಡ್,ಭೋಜರಾಜ್ ವಾಮಂಜೂರು, ನವೀನ್ ಡಿ ಪಡೀಲ್,ಹಾಗೂ ಇನ್ನಿತರರು ಉಪಸ್ಥಿತರಿದ್ದರು.

