Tuesday, November 17, 2026
Homeದೇಶಜೈಪುರ : ಭಾರತದ ಏಳಿಗೆಯನ್ನು ಸಹಿಸದ ದುಷ್ಟ ಶಕ್ತಿಗಳಿಂದ ದೇಶ ವಿಭಜನೆಗೆ ಸಂಚು : ಪ್ರತ್ಯೇಕತಾವಾದ...

ಜೈಪುರ : ಭಾರತದ ಏಳಿಗೆಯನ್ನು ಸಹಿಸದ ದುಷ್ಟ ಶಕ್ತಿಗಳಿಂದ ದೇಶ ವಿಭಜನೆಗೆ ಸಂಚು : ಪ್ರತ್ಯೇಕತಾವಾದ ಬಿತ್ತುವವರ ವಿರುದ್ಧ ಮೋಹನ್ ಭಾಗವತ್ ಗಂಭೀರ ಎಚ್ಚರಿಕೆ!

ಜೈಪುರ : ಭಾರತದ ಏಳಿಗೆಯನ್ನು ಸಹಿಸದ ಕೆಲವು ಶಕ್ತಿಗಳು ಜನರಲ್ಲಿ ಪ್ರತ್ಯೇಕತಾವಾದದ ಮನೋಭಾವ ಬಿತ್ತುವ ಮೂಲಕ ಸಮಾಜದಲ್ಲಿ ಸಂಘರ್ಷ ಸೃಷ್ಟಿಸಿ ದೇಶವನ್ನು ವಿಭಜಿಸುವ ಪ್ರಯತ್ನ ನಡೆಸುತ್ತಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದ ಆರೆಸ್ಸೆಸ್ ಸಂಗೀತ ಬ್ಯಾಂಡ್‌ನ ‘ಮಾರು ನಿನಾದ್ 2026’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶತಮಾನಗಳ ಹಿಂದೆ ಬ್ರಿಟಿಷರು ಭಾರತದಲ್ಲಿ ಅನುಸರಿಸಿದ್ದ ವಿಭಜನೆಯ ತಂತ್ರವನ್ನು ಈಗಲೂ ಕೆಲವು ಶಕ್ತಿಗಳು ಮರುಕಳಿಸುತ್ತಿವೆ ಎಂದು ಆರೋಪಿಸಿದರು.

ಜನರಲ್ಲಿ ಪ್ರತ್ಯೇಕತಾವಾದದ ಭಾವನೆ ಬಿತ್ತುವ ಮೂಲಕ ಪರಸ್ಪರ ಸಂಘರ್ಷಗಳನ್ನು ಹುಟ್ಟುಹಾಕಲಾಗುತ್ತಿದೆ. ಈ ಹಿಂದೆ ಕೂಡ ಇಂತಹ ಮನೋಭಾವಗಳು ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಮೇಲೆ ಪರಿಣಾಮ ಬೀರಿದ್ದವು. ಇದರಿಂದ ಅನೇಕ ಸಮುದಾಯಗಳು ಆರ್ಥಿಕವಾಗಿ ಹಿಂದುಳಿದಿವೆ. ಇದೀಗ ಮತ್ತೆ ಅಂತಹ ಪರಿಸ್ಥಿತಿ ನಿರ್ಮಿಸಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಒಗ್ಗಟ್ಟಿನಲ್ಲಿ ಬಲವಿದೆ: ಭಾಗವತ್ ಕರೆ

ಭಾರತೀಯರು ಒಗ್ಗಟ್ಟಿನಿಂದ ಇರುವವರೆಗೆ ಅವರನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂಬುದು ವಿಭಜನೆಯ ಪ್ರಯತ್ನ ನಡೆಸುವ ಶಕ್ತಿಗಳಿಗೆ ತಿಳಿದಿದೆ. ಹೀಗಾಗಿ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಭಾರತೀಯರು ವೈವಿಧ್ಯತೆಯಲ್ಲಿ ಏಕತೆಯ ತತ್ವಕ್ಕೆ ಬದ್ಧರಾಗಿರಬೇಕು. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದೇಶದ ಏಕತೆ ಮತ್ತು ಒಗ್ಗಟ್ಟನ್ನು ಕಾಪಾಡಬೇಕು ಎಂದು ಕರೆ ನೀಡಿದರು.

ನಾಳೆಯಿಂದ ಮಣಿಪುರ ಪ್ರವಾಸ

ಮಣಿಪುರದಲ್ಲಿ ನಡೆಯಲಿರುವ ಆರೆಸ್ಸೆಸ್ ಶತಮಾನೋತ್ಸವ ಸಮಾರಂಭದ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಲು ಮೋಹನ್ ಭಾಗವತ್ ಬುಧವಾರ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ.

ಮೂರು ದಿನಗಳ ಕಾಲ ಮಣಿಪುರದಲ್ಲೇ ಉಳಿಯಲಿರುವ ಅವರು, 2023ರ ಹಿಂಸಾಚಾರದಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಆರೆಸ್ಸೆಸ್ ವತಿಯಿಂದ ಕೈಗೊಳ್ಳಲಾಗಿರುವ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನೂ ಪರಿಶೀಲಿಸಲಿದ್ದಾರೆ.

2023ರಲ್ಲಿ ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಭಾಗವತ್ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular