ನವದೆಹಲಿ : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೀಪಾವಳಿ ಹಬ್ಬದ ಕುರಿತು ನೀಡಿದ ಹೇಳಿಕೆ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ದೀಪಾವಳಿಯನ್ನು ‘ಖುಷಿಯ ಈದ್’ ಎಂದು ಬಣ್ಣಿಸಿರುವ ಖರ್ಗೆ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಖರ್ಗೆ, ದೀಪಾವಳಿಯು ದೇಶದ ಅತಿದೊಡ್ಡ ಸಂತಸದ ಹಬ್ಬವಾಗಿದ್ದು, ಇದನ್ನು ದೀರ್ಘಕಾಲದವರೆಗೆ ಆಚರಿಸಲಾಗುತ್ತದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಈ ವೇಳೆ ದೀಪಾವಳಿಯನ್ನು ‘ಖುಷಿಯ ಈದ್’ ಎಂದು ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ಸನಾತನ ವಿರೋಧಿ ಮನಸ್ಥಿತಿ ಹಾಗೂ ಓಲೈಕೆ ರಾಜಕಾರಣದ ಭಾಗ ಎಂದು ಟೀಕಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಕಾಂಗ್ರೆಸ್ ಅಧ್ಯಕ್ಷರು ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿಯನ್ನು ‘ಖುಷಿಯ ಈದ್’ ಎಂದು ಕರೆಯುವ ಮೂಲಕ ಓಟ್ ಬ್ಯಾಂಕ್ ರಾಜಕಾರಣವನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೂ ಮೊದಲು ಸೋನಿಯಾ ಗಾಂಧಿ ಬಾಬರಿ ಮಸೀದಿ ಧ್ವಂಸವಾದ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದರು ಎಂಬ ವಿಚಾರವನ್ನೂ ಪ್ರಸ್ತಾಪಿಸಿರುವ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಸನಾತನ ವಿರೋಧಿ ಎಂಬ ಟೀಕೆ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಹಬ್ಬದ ಶುಭಾಶಯದ ಸಂದರ್ಭದಲ್ಲಿ ನೀಡಲಾದ ಹೇಳಿಕೆ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಸ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ.

