Tuesday, November 17, 2026
Homeಕ್ರೈಂಮಂಗಳೂರು : ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಮೆಡಿಕಲ್ ಬೋರ್ಡ್ ರಚನೆ – ಇಂದು ಶವ...

ಮಂಗಳೂರು : ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಮೆಡಿಕಲ್ ಬೋರ್ಡ್ ರಚನೆ – ಇಂದು ಶವ ಪತ್ತೆಯಾದ ಸ್ಥಳಕ್ಕೆ ತಜ್ಞ ವೈದ್ಯರ ಭೇಟಿ…!

ಮಂಗಳೂರು : ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ವಿಶೇಷ ತನಿಖಾ ತಂಡ (SIT) ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಕರಣದ ತನಿಖೆಗಾಗಿ ಮೂವರು ನುರಿತ ಫೋರೆನ್ಸಿಕ್ ವೈದ್ಯರನ್ನೊಳಗೊಂಡ ಮೆಡಿಕಲ್ ಬೋರ್ಡ್ ರಚಿಸಲಾಗಿದೆ.

SIT ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರ ನೇತೃತ್ವದಲ್ಲಿ ಈ ಮೆಡಿಕಲ್ ಬೋರ್ಡ್ ರಚನೆಯಾಗಿದ್ದು, ಬೆಂಗಳೂರಿನ ಒಬ್ಬರು ಹಾಗೂ ಹಾವೇರಿ ಮತ್ತು ಬೆಳಗಾವಿಯ ತಲಾ ಒಬ್ಬ ವೈದ್ಯರು ತಂಡದಲ್ಲಿದ್ದಾರೆ. ಇದರಲ್ಲಿ ಓರ್ವ ಮಹಿಳಾ ವೈದ್ಯೆ ಹಾಗೂ ಇಬ್ಬರು ಪುರುಷ ವೈದ್ಯರು ಸೇರಿದ್ದಾರೆ.

ಶವ ಪತ್ತೆಯಾದ ಸ್ಥಳಕ್ಕೆ ಇಂದು ಭೇಟಿ

ಸೌಜನ್ಯಳ ಶವ ಪತ್ತೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ಸ್ನಾನಘಟ್ಟದ ಸಮೀಪದ ಮಣ್ಣಸಂಕ ಪ್ರದೇಶಕ್ಕೆ ಮೆಡಿಕಲ್ ಬೋರ್ಡ್ ಇಂದು ಭೇಟಿ ನೀಡಲಿದೆ.

ಸೌಜನ್ಯಳ ಕೊಲೆ ನಡೆದಿದ್ದು ಇದೇ ಸ್ಥಳದಲ್ಲೇ ಅಥವಾ ಬೇರೆ ಯಾವುದಾದರೂ ಜಾಗದಲ್ಲೇ ಎಂಬ ಮಹತ್ವದ ಅಂಶವನ್ನು ಪತ್ತೆಹಚ್ಚುವುದು ತಂಡದ ಪ್ರಮುಖ ಉದ್ದೇಶವಾಗಿದೆ.

ಫೋಟೋ, ವಿಡಿಯೋ ಪರಿಶೀಲಿಸಿ ತನಿಖೆ

ಶವ ಪತ್ತೆಯಾದ ಸ್ಥಳದಲ್ಲಿ ನಿಂತು, ಅಂದು ಶವ ಪತ್ತೆಯಾದ ಸಂದರ್ಭದ ಫೋಟೋಗಳು ಮತ್ತು ವಿಡಿಯೋಗಳನ್ನು ಪರಿಶೀಲನೆ ನಡೆಸಲಿರುವ ವೈದ್ಯರ ತಂಡ, ಘಟನೆಯ ಸ್ಥಳದ ಭೌತಿಕ ಪರಿಸ್ಥಿತಿಯನ್ನೂ ಅಧ್ಯಯನ ಮಾಡಲಿದೆ.

ಸೌಜನ್ಯಳನ್ನು ಇದೇ ಸ್ಥಳದಲ್ಲಿ ಕೊಲೆ ಮಾಡಲಾಗಿತ್ತೇ? ಅಥವಾ ಬೇರೆಡೆ ಕೊಲೆ ಮಾಡಿ ಬಳಿಕ ಶವವನ್ನು ಇಲ್ಲಿ ತಂದು ಹಾಕಲಾಗಿತ್ತೇ? ಎಂಬ ಪ್ರಶ್ನೆಗಳಿಗೆ ವೈಜ್ಞಾನಿಕ ಆಧಾರದ ಮೇಲೆ ಉತ್ತರ ಕಂಡುಕೊಳ್ಳಲು ತನಿಖೆ ನಡೆಯಲಿದೆ.

ನುರಿತ ಫೋರೆನ್ಸಿಕ್ ತಜ್ಞ ವೈದ್ಯರು ನಡೆಸುವ ಪರಿಶೀಲನೆಯ ಬಳಿಕ ಮೆಡಿಕಲ್ ಬೋರ್ಡ್ SITಗೆ ವರದಿ ಸಲ್ಲಿಸಲಿದೆ. ಈ ವರದಿಯು ಸೌಜನ್ಯ ಪ್ರಕರಣದ ಮರುತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular