ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಟೇಕ್ಆಫ್ ವೇಳೆ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಪೈಲಟ್ನ ಸಮಯಪ್ರಜ್ಞೆಯಿಂದ ವಿಮಾನದಲ್ಲಿದ್ದ 236 ಮಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ.
ಸೋಮವಾರ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವು ಸಂಜೆ 6:05ಕ್ಕೆ ಟೇಕ್ಆಫ್ ಆಗಬೇಕಿತ್ತು. ವಿಮಾನದಲ್ಲಿ 229 ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಇದ್ದರು. ವಿಮಾನ ಟೇಕ್ಆಫ್ಗಾಗಿ ರನ್ವೇಯಲ್ಲಿ ವೇಗ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎನ್ನಲಾಗಿದೆ.
ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ವಿಮಾನಕ್ಕೆ ಬ್ರೇಕ್ ಹಾಕಿ ಟೇಕ್ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ನಂತರ ಇಂಡಿಗೋ ಸಂಸ್ಥೆಯು ಪ್ರಯಾಣಿಕರಿಗಾಗಿ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲೂ ಇಂಡಿಗೋ ವಿಮಾನದ ಟೇಕ್ಆಫ್ ರದ್ದು!
ಇದೇ ದಿನ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಬೆಳಗ್ಗೆ 7:20ಕ್ಕೆ ಹೊರಡಬೇಕಿದ್ದ ಇಂಡಿಗೋ ವಿಮಾನವು ಟೇಕ್ಆಫ್ಗೆ ಅನುಮತಿ ಪಡೆದು ರನ್ವೇಯಲ್ಲಿ ವೇಗವಾಗಿ ಸಾಗುತ್ತಿದ್ದಾಗ ತಾಂತ್ರಿಕ ದೋಷ ಕಂಡುಬಂದಿದೆ.
ತಕ್ಷಣ ಪೈಲಟ್ ವಿಮಾನಕ್ಕೆ ಬ್ರೇಕ್ ಹಾಕಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಉಂಟಾಗಿದೆ. ಈ ವೇಳೆ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರಿಗೆ ತಲೆ ಕೆಳಗೆ ಬಾಗಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ತಾಂತ್ರಿಕ ದೋಷದ ಕಾರಣ ಟೇಕ್ಆಫ್ ರದ್ದುಗೊಳಿಸಿರುವುದಾಗಿ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.
ಸುಮಾರು 30 ನಿಮಿಷಗಳ ಕಾಲ ರನ್ವೇಯಲ್ಲೇ ನಿಂತಿದ್ದ ವಿಮಾನದಿಂದ ಪ್ರಯಾಣಿಕರನ್ನು ಕೆಳಗಿಳಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಒಂದೇ ದಿನ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಎರಡು ಇಂಡಿಗೋ ವಿಮಾನಗಳ ಟೇಕ್ಆಫ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಪೈಲಟ್ಗಳ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತಗಳು ತಪ್ಪಿವೆ.

