ನವದೆಹಲಿ : ದೇಶದ ಪ್ರಮುಖ ಉದ್ಯಮ ಕುಟುಂಬಗಳಲ್ಲಿ ಒಂದಾದ ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ವಿವಾದ ತೀವ್ರಗೊಂಡಿದೆ. TVS ಕಂಪನಿಯ ಮುಖ್ಯಸ್ಥ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮಿ ವೇಣು ಅವರು ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ಆಗ್ರಹಿಸಿ ತಂದೆಗೆ ವಿಭಜನ ನೋಟಿಸ್ (Partition Notice) ನೀಡಿದ್ದಾರೆ.
2020ರಲ್ಲಿ ಟಿವಿಎಸ್ ಕುಟುಂಬದೊಳಗೆ ನಡೆದಿದ್ದ ಆಸ್ತಿ ಹಂಚಿಕೆ ಒಪ್ಪಂದದ ಪ್ರಕಾರ ತಮಗೆ ಸಮಾನ ಪಾಲು ದೊರೆತಿಲ್ಲ ಎಂದು ಲಕ್ಷ್ಮಿ ವೇಣು ಆರೋಪಿಸಿದ್ದಾರೆ. ತಮ್ಮ ಕಿರಿಯ ಸಹೋದರ ಸುದರ್ಶನ್ ವೇಣು ಅವರಿಗೆ ಹೆಚ್ಚಿನ ಆಸ್ತಿ ನೀಡಲಾಗಿದೆ ಎಂಬುದು ಅವರ ಪ್ರಮುಖ ಆಕ್ಷೇಪವಾಗಿದೆ.
1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ತಮಗೂ ಸಮಾನ ಪಾಲು ದೊರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಮ್ಮ ಪಾಲಿಗೆ ಟಿವಿಎಸ್ ಕುಟುಂಬದ ಕೆಲವು ಕಂಪನಿಗಳ ಉಸ್ತುವಾರಿ ನೀಡಲಾಗಿದ್ದರೂ, ಅದು ಸಂಪೂರ್ಣ ಮಾಲಕತ್ವ ಅಥವಾ ಆಸ್ತಿ ಹಂಚಿಕೆಗೆ ಸಮಾನವಲ್ಲ ಎಂದು ಲಕ್ಷ್ಮಿ ವೇಣು ವಾದಿಸಿದ್ದಾರೆ.
ಇದೇ ವೇಳೆ, ಲಕ್ಷ್ಮಿ ವೇಣು ಅವರಿಗೆ ಅವರ ತಾಯಿ ಹಾಗೂ ಟಾಫೆ ಟ್ರ್ಯಾಕ್ಟರ್ಸ್ ಕಂಪನಿಯ ಮುಖ್ಯಸ್ಥೆ ಮಲ್ಲಿಕಾ ಶ್ರೀನಿವಾಸನ್ ಅವರ ಬೆಂಬಲವಿದೆ ಎನ್ನಲಾಗಿದೆ.
ಆದರೆ ವೇಣು ಶ್ರೀನಿವಾಸನ್ ಅವರು ತಮ್ಮ ಬಳಿಯಿರುವ ಆಸ್ತಿ ಪಿತ್ರಾರ್ಜಿತವಲ್ಲ, ಸ್ವಯಾರ್ಜಿತ ಆಸ್ತಿಯಾಗಿದೆ ಎಂದು ವಾದಿಸಿದ್ದಾರೆ. ಅಲ್ಲದೆ, ಮಕ್ಕಳಿಬ್ಬರಿಗೂ ಸಮಾನವಾಗಿ ಆಸ್ತಿ ಹಂಚಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಟಾಟಾ ಕುಟುಂಬದ ಆಸ್ತಿ ವಿವಾದದ ಬಳಿಕ ಇದೀಗ ಟಿವಿಎಸ್ ಕುಟುಂಬದಲ್ಲೂ ಆಸ್ತಿ ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿರುವುದು ಉದ್ಯಮ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

