ಪಟ್ಟನಂತಿಟ್ಟ : ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರಸಕ್ತ ಸಾಲಿನ ಮಂಡಲ–ಮಕರಜ್ಯೋತಿ ಯಾತ್ರೆಗೆ ಸೋಮವಾರ ವಿಧ್ಯುಕ್ತವಾಗಿ ಚಾಲನೆ ದೊರೆತಿದೆ.
ಸೋಮವಾರ ಸಂಜೆ 4 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ದೀಪ ಬೆಳಗಿಸುವ ಮೂಲಕ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಬಳಿಕ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಶರಣು ಘೋಷಗಳನ್ನು ಮೊಳಗಿಸಿದರು. ದೇವಸ್ಥಾನದಲ್ಲಿ ಭಕ್ತರ ಭಾರೀ ಸಂದಣಿ ಕಂಡುಬಂತು.
ಈ ಸಂದರ್ಭದಲ್ಲಿ ಶಬರಿಮಲೆಯ ನೂತನ ಮೇಲ್ಶಾಂತಿಯಾಗಿ ಸುಬ್ರಹ್ಮಣ್ಯನ್ ನಂಬೂದಿರಿ ಹಾಗೂ ಮಳಿಕಪ್ಪುರಂ ದೇವಸ್ಥಾನದ ಮೇಲ್ಶಾಂತಿಯಾಗಿ ದಾಮೋದರನ್ ನಂಬೂದಿರಿ ಅಧಿಕಾರ ವಹಿಸಿಕೊಂಡರು.
ನವೆಂಬರ್ 17ರಿಂದ ದೈನಂದಿನ ಪೂಜೆ ಆರಂಭ
ಮಂಗಳವಾರ ಮುಂಜಾನೆ 3 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯುವುದರೊಂದಿಗೆ ದೈನಂದಿನ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿವೆ. ನಿರ್ಮಾಲ್ಯ ದರ್ಶನ, ಅಭಿಷೇಕ, ಗಣಪತಿ ಹೋಮ, ತುಪ್ಪಾಭಿಷೇಕ, ಉಷಾಪೂಜೆ, ಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ರಾತ್ರಿ 9.15ರಿಂದ ಅತ್ತಾಳ ಪೂಜೆ ನಡೆಯಲಿದ್ದು, ರಾತ್ರಿ 10.50ಕ್ಕೆ ಹರಿವರಾಸನಂ ಪಠಣದ ಬಳಿಕ 11 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ.
ಭಕ್ತರ ಸುರಕ್ಷತೆಗೆ ವಿಶೇಷ ವ್ಯವಸ್ಥೆ
ಮಂಡಲ–ಮಕರಜ್ಯೋತಿ ಯಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸುಗಮ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ದೇವಸ್ವಂ ಮಂಡಳಿ ಹಾಗೂ ಪೊಲೀಸ್ ಇಲಾಖೆ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿವೆ. ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ವಿಶೇಷ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ವಿವಿಧ ರಾಜ್ಯಗಳಿಂದ ಭಕ್ತರು ಶಬರಿಮಲೆಗೆ ಆಗಮಿಸುತ್ತಿದ್ದಾರೆ.

