ಬಳ್ಳಾರಿ : ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾ ಗಿದ್ದ ನಾಲ್ಕು ಬಾಣಂತಿಯರ ಸರಣಿ ಸಾವಿನ ಬಳಿಕ ಬಿಮ್ಸ್ನಲ್ಲೂ ಮತ್ತೊಬ್ಬ ಬಾಣಂತಿ ಸಾವಿಗೀಡಾಗಿದ್ದು, ಬಾಣಂತಿಯರ ಸರಣಿ ಮರಣ ಆತಂಕಕ್ಕೆ ಕಾರಣವಾಗಿದೆ.
ಬಳ್ಳಾರಿಯಲ್ಲಿ ಕಳೆದ 10 ದಿನಗಳಲ್ಲಿ ಒಟ್ಟು ಐವರು ಬಾಣಂತಿಯರು ಸಾವನ್ನಪ್ಪಿದ್ದರಿಂದ ಪ್ರಕರಣ ಗಂಭೀರತೆ ಪಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಏಳು ಜನರಿಗೆ ವೈದ್ಯರ ನಿರ್ಲಕ್ಷö್ಯದ ಪರಿಣಾಮ ಸೋಂಕು ತಗುಲಿದೆ. ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಅವರು ಜನ್ಮ ನೀಡಿದ ಹಸುಗೂಸುಗಳು ಅನಾಥವಾಗಿವೆ. ಈ ಪ್ರಕರಣ ಜೀವಂತ ಇರುವಾಗಲೇ ಬಿಮ್ಸ್ನಲ್ಲೂ ಮತ್ತೊಬ್ಬ ಬಾಣಂತಿ ಸಾವಿಗೀಡಾಗಿದ್ದಾಳೆ. ಇದುವರೆಗೂ ಈ ಬಗ್ಗೆ ಮೌನ ಮುರಿಯದೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಈಗ ಜಿಲ್ಲಾಧಿಕಾರಿಗಳ ಜತೆ ನಿರಂತರ ಚರ್ಚೆ ನಡೆಸಿದ್ದಾರೆ. ನಿರಂತರವಾಗಿ ಬಾಣಂತಿಯರು ಸಾವಿಗೀಡಾಗುತ್ತಿರುವುದಕ್ಕೆ ಕಾರಣವೇನು? ಈ ಬಗ್ಗೆ ವಾಸ್ತವ ವರದಿ ನೀಡುವಂತೆ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾಗೆ ಗುರುವಾರ ಸೂಚನೆ ನೀಡಿದ್ದರು.
ಆದರೆ ಸಿಸೇರಿಯನ್ ವೇಳೆ ನೀಡಿದ್ದ “IV ಗ್ಲೂಕೋಸ್”ನಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತನಿಖಾ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.ಐವಿ (ಇಂಟ್ರಾವೆನಸ್ ದ್ರಾವಣ) ಕಳಪೆ ಗುಣಮಟ್ಟದಿಂದ ಕೂಡಿದೆ. ಆದರೂ, ಕೂಡ ವೈದ್ಯರು ಸಿಸೇರಿಯನ್ ವೇಳೆ “IV ಗ್ಲುಕೋಸ್” ನೀಡಿದ್ದರಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತನಿಖಾ ತಂಡ ಪತ್ತೆ ಹಚ್ಚಿದೆ. ಹೀಗಾಗಿ, ಇಂಟ್ರಾವೆನಸ್ ದ್ರಾವಣ ಬಳಕೆ ಮಾಡದಂತೆ ಆರೋಗ್ಯ ಇಲಾಖೆ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ಸರಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿದ್ದು ಬಾಣಂತಿಯರ ಸಾವಿಗೆ ಕಾರಣವೇನು ಎಂಬುವುದನ್ನು ತಿಳಿಯಲು ಸರ್ಕಾರ ತಜ್ಞರ ಸಮಿತಿ ರಚಿಸಿತ್ತು. ಡಾ. ಸವಿತಾ, ಡಾ. ಭಾಸ್ಕರ್ ಮತ್ತು ಡಾ. ಹರ್ಷ ಅವರನ್ನು ಒಳಗೊಂಡ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಿದ್ದು, ಈ ಕೂಡಲೇ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾವಿಗೆ ಏನು ಕಾರಣ ಎಂದು ತನಿಖೆ ನಡೆಸಬೇಕು ಎಂದು ಸೂಚಿಸಿತ್ತು. ತನಿಖೆ ಬಳಿಕ ಸರ್ಕಾರಕ್ಕೆ ತುರ್ತು ವರದಿಯನ್ನ ಸಲ್ಲಿಕೆ ಮಾಡಬೇಕೆಂದು ಸೂಚನೆ ನೀಡಿತ್ತು. ತನಿಖೆ ನಡೆಸಿದ ತಂಡ ಸಾವಿಗೆ ಕಾರಣವೇನು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಐವಿ ಗ್ಲೂಕೋಸ್ ನೀಡಿರುವುದೇ ಗರ್ಭಿಣಿಯರ ಸಾವಿಗೆ ಕಾರಣ ಎಂದು ತನಿಖಾ ತಂಡ ವರದಿ ನೀಡಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.