ಹಾಸನ : ನಗರದ ಎಂ.ಜೆ ಫಿಟೈಸ್ ಜಿಮ್‌ನಲ್ಲಿ ಸಾಮಾನ್ಯ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಮಾರಣಾಂತಿಕ ಹಲ್ಲೆಗೆ ತಿರುಗಿ ಯುವಕನೊಬ್ಬ ಕೋಮಾ ಸ್ಥಿತಿಗೆ ತಲುಪಿರುವ ಘಟನೆ ನಡೆದಿದೆ.ಈ ಹೊಡೆತದಿಂದ ಯುವಕನ ಕಿವಿಯ ಹಿಂಭಾಗದ ಮೂಲೆಗೆ ಗಂಭೀರ ಗಾಯಗಳಾಗಿದೆ.
ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ವರುಣ್ ಎಂಬ ಯುವಕನ ಭುಜ ಕೀರ್ತನ್‌ಗೆ ತಗುಲಿದ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ ಎನ್ನಲಾಗಿದೆ. ಆರಂಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕೋಪಗೊಂಡ ಕೀರ್ತನ್ ವರುಣ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆ ವೇಳೆ ವರುಣ್ ತಲೆಗೆ ಬಲವಾದ ಕಿಕ್ ಬಿದ್ದ ಪರಿಣಾಮ ಆತ ನೆಲಕ್ಕುರುಳಿದ್ದಾನೆ. ತಕ್ಷಣ ಜಿಮ್‌ನಲ್ಲಿದ್ದ ಇತರರು ಮಧ್ಯಪ್ರವೇಶಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ತೀವ್ರ ತಲೆಗೆ ಗಾಯಗೊಂಡಿರುವ ವರುಣ್ ಇದೀಗ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಜಿಮ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಸಾಮಾನ್ಯ ವಿಚಾರಕ್ಕೆ ಈ ರೀತಿ ಹಲ್ಲೆ ನಡೆದಿರುವುದು ನಗರದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಆರೋಪಿಯಾದ ಕೀರ್ತನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.


