ಮಂಗಳೂರು : ಗೌರಿ-ಗಣೇಶ ಹಬ್ಬದ ಸಂಭ್ರಮ ಮಂಗಳೂರಿನಲ್ಲಿ ಮತ್ತಷ್ಟು ಕಳೆಗಟ್ಟಿದ್ದು, ವಿಘ್ನನಿವಾರಕ ಗಣಪತಿಯ ಆರಾಧನೆಗೆ ನಗರದೆಲ್ಲೆಡೆ ಭರ್ಜರಿ ಸಿದ್ಧತೆಗಳು ನಡೆದಿವೆ. ಮನೆಮನೆಗಳಲ್ಲಿ ಗಣಪತಿ ಪೂಜೆಗೆ ಸಿದ್ಧತೆ ನಡೆದಿದ್ದರೆ, ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದಲೂ ಅದ್ಧೂರಿ ಆಚರಣೆಗೆ ಸಜ್ಜಾಗಿದೆ.



ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 174 ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಂಟ್ಸ್ ಹಾಸ್ಟೆಲ್, ನೆಹರು ಮೈದಾನ, ಸಂಘನಿಕೇತನ, ಕೆ.ಎಸ್.ಆರ್.ಟಿ.ಸಿ ಸೇರಿದಂತೆ ನಗರದ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಇದೇ ವೇಳೆ ತುಳುನಾಡಿನ ಸಾಂಪ್ರದಾಯಿಕ ‘ಕುರಲ್ ಪರ್ಬ’ ಆಚರಣೆಯೂ ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದೆ. ಹೊಸ ಭತ್ತದ ತೆನೆಗೆ ಪೂಜೆ ಸಲ್ಲಿಸಿ, ಅದನ್ನು ಮನೆಗೆ ಕೊಂಡೊಯ್ಯುವ ಸಂಪ್ರದಾಯದ ಮೂಲಕ ತುಳುನಾಡಿನ ಕೃಷಿ ಸಂಸ್ಕೃತಿ ಮತ್ತು ಪರಂಪರೆಯನ್ನು ಸ್ಮರಿಸಲಾಗುತ್ತದೆ.
ಕಣ್ಣಗುಡ್ಡೆಯ ಕೊರಗಜ್ಜ ಕ್ಷೇತ್ರದಲ್ಲಿ 5ನೇ ವರ್ಷದ ಕುರಲ್ ಪರ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭತ್ತದ ತೆನೆ ಹಾಗೂ ಕಬ್ಬನ್ನು ವಿತರಿಸಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು. ಕಾರ್ಯಕ್ರಮದಲ್ಲಿ ಡೆನಿಸ್ ಡಿ’ಸಿಲ್ವಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕುರಲ್ ಪರ್ಬದಲ್ಲಿ ತೆನೆ ಸಮೃದ್ಧಿಯ ಸಂಕೇತವಾಗಿದ್ದರೆ, ಕಬ್ಬು ಸಿಹಿ ಮತ್ತು ಸಂತೋಷದ ಪ್ರತೀಕವಾಗಿದೆ. ರೈತನ ಪರಿಶ್ರಮ, ಅನ್ನದ ಮಹತ್ವ ಹಾಗೂ ಕೃಷಿ ಪರಂಪರೆಯ ಬಗ್ಗೆ ಗೌರವ ಮೂಡಿಸುವ ವಿಶಿಷ್ಟ ಆಚರಣೆಯಾಗಿ ಕುರಲ್ ಪರ್ಬ ಗಮನ ಸೆಳೆಯುತ್ತಿದೆ. ಗಣೇಶ ಚತುರ್ಥಿಯೊಂದಿಗೆ ಕುರಲ್ ಪರ್ಬ ಆಚರಣೆ ನಡೆಯುತ್ತಿರುವುದು ತುಳುನಾಡಿನ ಧಾರ್ಮಿಕ ಹಾಗೂ ಕೃಷಿ ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಗಿದೆ. ಗಣೇಶೋತ್ಸವದ ಮೂಲಕ ಭಕ್ತಿ, ಸಂಸ್ಕೃತಿ ಹಾಗೂ ಭಾವೈಕ್ಯತೆಯ ಸಂದೇಶ ಸಾರಲು ವಿವಿಧ ಸಮಿತಿಗಳು ಮುಂದಾಗಿವೆ.
ಧಾರ್ಮಿಕ ಆಚರಣೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಸಂಗೀತ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳಿಗೂ ಗಣೇಶೋತ್ಸವ ಸಮಿತಿಗಳು ಸಿದ್ಧತೆ ಮಾಡಿಕೊಂಡಿವೆ. ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ.

