ಮಂಗಳೂರು : ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೆಡಿಪಿ ಸಭೆಯಲ್ಲಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಗೈರು ಹಾಜರಾಗಿದ್ದಕ್ಕೆ ಉಸ್ತುವಾರಿ ಸಚಿವ ಯು.ಟಿ. ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ “ಪೊಲೀಸ್ ಕಮಿಷನರ್ ಎಲ್ಲಿ?” ಎಂದು ಯು.ಟಿ. ಖಾದರ್ ಪ್ರಶ್ನಿಸಿದರು. ಈ ವೇಳೆ ಕಮಿಷನರ್ ಪರವಾಗಿ ಸಮಜಾಯಿಷಿ ನೀಡಲು ಡಿಸಿಪಿ ಸ್ಯಾಮ್ ವರ್ಗೀಸ್ ಮುಂದಾದರು. ಆದರೆ ಡಿಸಿಪಿ ನೀಡಿದ ವಿವರಣೆಯಿಂದಲೂ ಸಮಾಧಾನಗೊಳ್ಳದ ಸಚಿವರು, ಅವರ ವಿರುದ್ಧವೂ ಗರಂ ಆದರು. “ಡಿಸಿಗೆ ರೈಟಿಂಗ್‌ನಲ್ಲಿ ಕೊಟ್ಟಿದ್ದಾರಾ? ರೂಲ್ಸ್ ಎಲ್ಲರಿಗೂ ಒಂದೇ” ಎಂದು ಯು.ಟಿ. ಖಾದರ್ ಪ್ರಶ್ನಿಸಿದರು.
“ಕಮಿಷನರ್ ಡಿಸಿಗೆ ಬರೆದು ಕೊಟ್ಟಿದ್ದಾರಾ? ಬೇರೆಯವರಿಗೆ ಕಾನೂನು ಹೇಳೋರು ಕಾನೂನು ಪಾಲಿಸೋಕೆ ಆಗಲ್ವಾ? ರೂಲ್ಸ್ ಹೇಳೋರು ರೂಲ್ಸ್ ಫಾಲೋ ಮಾಡಲ್ವಾ?” ಎಂದು ಸಚಿವರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಕೆಡಿಪಿ ಸಭೆಗೆ ಅಧಿಕಾರಿಗಳ ಹಾಜರಾತಿ ಕಡ್ಡಾಯವಾಗಿದ್ದು, ಸಭೆಗೆ ಬರುವ ಅಧಿಕಾರಿಗಳ ಅಟೆಂಡೆನ್ಸ್ ಇರಬೇಕು ಎಂದು ಸಚಿವರು ಸೂಚಿಸಿದರು.
“ಎಷ್ಟೇ ದೊಡ್ಡ ಆಫೀಸರ್ ಆದರೂ ಸಭೆಗೆ ಬರಲು ಆಗದಿದ್ದರೆ ರೈಟಿಂಗ್‌ನಲ್ಲಿ ಮಾಹಿತಿ ನೀಡಬೇಕು. ಬರಲು ಸಾಧ್ಯವಿಲ್ಲದಿದ್ದರೆ ಒಂದು ದಿನ ಮುಂಚಿತವಾಗಿಯೇ ಅನುಮತಿ ಪಡೆಯಬೇಕು” ಎಂದು ಯು.ಟಿ. ಖಾದರ್ ಖಡಕ್ ಸೂಚನೆ ನೀಡಿದರು.
ಪೊಲೀಸ್ ಕಮಿಷನರ್ ಹಾಗೂ ಇತರ ಅಧಿಕಾರಿಗಳ ಗೈರುಹಾಜರಿ ವಿಚಾರ ಕೆಡಿಪಿ ಸಭೆಯಲ್ಲಿ ಕೆಲಕಾಲ ಚರ್ಚೆಗೆ ಕಾರಣವಾಗಿದ್ದು, ಅಧಿಕಾರಿಗಳಿಗೂ ನಿಯಮಗಳು ಒಂದೇ ಎಂಬ ಸಂದೇಶವನ್ನು ಸಚಿವರು ರವಾನಿಸಿದರು.

