ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಮತ್ತೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಶಿವಮೊಗ್ಗ ಜಿಲ್ಲೆಯ ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಕನಹಸೂಡಿ ಗ್ರಾಮದಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಕಾಕನಹಸೂಡಿ ಗ್ರಾಮದ ದೊಡ್ಡಕೆರೆ ಸಮೀಪ ಕಾಣಿಸಿಕೊಂಡ ಕಾಡಾನೆಯನ್ನು ಕಂಡು ದಾರಿಹೋಕರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ. ಗ್ರಾಮಸ್ಥರು ಶಬ್ದ ಮಾಡಿ, ಕೂಗಾಡಿ ಆನೆಯನ್ನು ಓಡಿಸಲು ಯತ್ನಿಸಿದರೂ, ಕಾಡಾನೆ ಯಾವುದೇ ಭಯವಿಲ್ಲದೆ ಘೀಳಿಡುತ್ತಾ ಜನರತ್ತ ದಾವಿಸಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗೆ ಅಟ್ಟಲು ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗಿದೆ. ಗ್ರಾಮಸ್ಥರು ತಕ್ಷಣ ಸೂಕ್ತ ಕ್ರಮ ಕೈಗೊಂಡು ಜನರ ಸುರಕ್ಷತೆ ಖಚಿತಪಡಿಸಬೇಕೆಂದು ಒತ್ತಾಯಿಸಿದ್ದಾರೆ.


