ಬೆಳಗಾವಿ : ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆಯಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸುವ ರಾಜ್ಯ ಬಿಜೆಪಿ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್ ಕರ್ನಾಟಕ ಘಟಕ ಸೋಮವಾರ ಪ್ರತಿಭಟನೆ ನಡೆಸಿತು.
ಸಭಾಧ್ಯಕ್ಷರ ಪೀಠದ ಹಿಂದೆ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಿರುವ ಕ್ರಮವನ್ನು ಖಂಡಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಹಿರಿಯ ಶಾಸಕರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು.
ಅಧಿವೇಶನದ ಮೊದಲ ದಿನವಾದ ಸೋಮವಾರ ಸುವರ್ಣ ವಿಧಾನಸೌಧದ ಒಳಗೆ ಸಾವರ್ಕರ್ ಸೇರಿದಂತೆ ಛಾಯಾಚಿತ್ರಗಳನ್ನು ಅನಾವರಣಗೊಳಿಸಲು ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ.
ಅಧಿವೇಶನ ಆರಂಭಕ್ಕೂ ಮುನ್ನ ನಡೆದ ಪ್ರತಿಭಟನೆಗಳು ಬಿರುಸಿನ ಚಳಿಗಾಲದ ಅಧಿವೇಶನವನ್ನು ಸೂಚಿಸುತ್ತಿವೆ. ಇನ್ನು ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ಆಡಳಿತಾರೂಢ ಬಿಜೆಪಿಗೆ ಇದು ಕೊನೆಯ ಅಧಿವೇಶನವಾಗಿದೆ.
ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಶಿಶುನಾಳ ಷರೀಫ್, ನಾರಾಯಣಗುರು, ಅಂಬೇಡ್ಕರ್, ಜವಾಹರಲಾಲ್ ನೆಹರು ಅವರಂತಹ ಸಮಾಜ ಸುಧಾರಕರು, ಸಂತರು ಹಾಗೂ ಮಹಾನ್ ವ್ಯಕ್ತಿಗಳ ಭಾವಚಿತ್ರ ಅಳವಡಿಸುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರದಲ್ಲಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡರು.