ಮಂಗಳೂರು : ಅಪ್ರಾಪ್ತ ಬಾಲಕಿಯ ಮೇಲೆ ಪದೇಪದೇ ಅತ್ಯಾಚಾರ ಎಸಗಿ, ನಗ್ನ ಚಿತ್ರಗಳನ್ನು ಸಂಗ್ರಹಿಸಿ ವೈರಲ್ ಮಾಡುವುದಾಗಿ ಹಾಗೂ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-2) 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ವಿವಿಧ ಕಲಂಗಳಡಿ ದಂಡ ವಿಧಿಸಿದೆ.
ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಸೋನು ಮ್ಯಾಕ್ಲಿನ್ ನೊರೊನ್ಹ (20), ದೇವಿನಗರ, ಕುಂಜತ್ತಬೈಲ್ ನಿವಾಸಿ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರದಂತೆ, ಆರೋಪಿ 2024ರ ಫೆಬ್ರವರಿಯಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನೆಪದಲ್ಲಿ ಮನವೊಲಿಸಿ, ಶಕ್ತಿನಗರ ಮತ್ತು ಅಳಪೆ ಗ್ರಾಮದ ವಿವಿಧ ಸ್ಥಳಗಳಲ್ಲಿ 2024ರ ಸೆಪ್ಟೆಂಬರ್ನಿಂದ 2025ರ ಜೂನ್ವರೆಗೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಇದಲ್ಲದೆ, ಬಾಲಕಿ ಸ್ನಾನಗೃಹದಲ್ಲಿದ್ದಾಗ ವೀಡಿಯೊ ಕಾಲ್ ಮಾಡಿ ನಗ್ನ ದೃಶ್ಯಗಳ ಸ್ಕ್ರೀನ್ಶಾಟ್ಗಳನ್ನು ತನ್ನ ಮೊಬೈಲ್ನಲ್ಲಿ ಸಂಗ್ರಹಿಸಿಕೊಂಡು, ದೈಹಿಕ ಸಂಪರ್ಕಕ್ಕೆ ಬಾರದಿದ್ದರೆ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಜೊತೆಗೆ ಬಾಲಕಿ, ಆಕೆಯ ತಾಯಿ ಹಾಗೂ ಅಕ್ಕನನ್ನು ಕೊಲೆ ಮಾಡುವುದಾಗಿಯೂ ಜೀವ ಬೆದರಿಕೆ ಒಡ್ಡಿದ್ದನು.
ಕಂಕನಾಡಿ ನಗರ ಪೊಲೀಸ್ ಠಾಣೆಯ ಆಗಿನ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್ ಪ್ರಕರಣದ ತನಿಖೆ ನಡೆಸಿ, ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ ವಾದ ಮಂಡಿಸಿದ್ದರು.
ನ್ಯಾಯಾಲಯವು ಪೋಕ್ಸೊ ಕಾಯ್ದೆ ಕಲಂ 6 ಹಾಗೂ ಬಿಎನ್ಎಸ್ ಕಲಂ 64(2)(m) ಅಡಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹50,000 ದಂಡ, ಬಿಎನ್ಎಸ್ ಕಲಂ 77, ಪೋಕ್ಸೊ ಕಲಂ 15 ಹಾಗೂ ಐಟಿ ಕಾಯ್ದೆ ಕಲಂ 66(E) ಅಡಿ ತಲಾ ಒಂದು ವರ್ಷದ ಕಾರಾಗೃಹ ಶಿಕ್ಷೆ ಮತ್ತು ₹5,000 ದಂಡ ವಿಧಿಸಿದೆ.


