Wednesday, October 7, 2026
Homeದೇಶನವದೆಹಲಿ : ದಿಲ್ಲಿಯಲ್ಲಿ ವಿಪಕ್ಷಗಳ ಬೃಹತ್ ಪ್ರತಿಭಟನೆ : ರಾಹುಲ್, ಪ್ರಿಯಾಂಕಾ ವಶಕ್ಕೆ, ಬಳಿಕ ಬಿಡುಗಡೆ.

ನವದೆಹಲಿ : ದಿಲ್ಲಿಯಲ್ಲಿ ವಿಪಕ್ಷಗಳ ಬೃಹತ್ ಪ್ರತಿಭಟನೆ : ರಾಹುಲ್, ಪ್ರಿಯಾಂಕಾ ವಶಕ್ಕೆ, ಬಳಿಕ ಬಿಡುಗಡೆ.

ನವದೆಹಲಿ : ಎಸ್‌ಐಆರ್‌ (Special Intensive Revision) ಪ್ರಕ್ರಿಯೆಯಲ್ಲಿ ಲೋಪ ಹಾಗೂ ಏಕಪಕ್ಷೀಯ ನಿರ್ಧಾರದ ಆರೋಪಗಳನ್ನು ಮುಂದಿಟ್ಟು ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಐಎನ್‌ಡಿಐಎ ಕೂಟ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಸುಮಾರು 9 ಗಂಟೆಗಳ ಕಾಲ ನಡೆದ ಪ್ರತಿಭಟನೆ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಸಂಸತ್ ಭವನದಿಂದ ಜಾಥಾ ಬೆಳಗ್ಗೆಯೇ ಸಂಸತ್ ಭವನದಲ್ಲಿ ಒಗ್ಗೂಡಿದ ವಿಪಕ್ಷಗಳ ಸಂಸದರು ಹಾಗೂ ಕಾರ್ಯಕರ್ತರು ಮಕರ ದ್ವಾರದಿಂದ ಮೆರವಣಿಗೆ ಆರಂಭಿಸಿದರು. ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮುತ್ತಿಗೆ ಹಾಕುವುದು ಪ್ರತಿಭಟನಕಾರರ ಉದ್ದೇಶವಾಗಿತ್ತು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಜಾಥಾದಲ್ಲಿ ಭಾಗವಹಿಸಿದ್ದರು.

ಮಾರ್ಗ ಮಧ್ಯೆಯೇ ಪೊಲೀಸರಿಂದ ತಡೆ.

ಆಕಾಶವಾಣಿ ಭವನ ಹಾಗೂ ನೀತಿ ಆಯೋಗದ ಕಚೇರಿ ಬಳಿ ಪ್ರತಿಭಟನಕಾರರನ್ನು ಪೊಲೀಸರು ತಡೆದು ಬ್ಯಾರಿಕೇಡ್‌ಗಳನ್ನು ಅಳವಡಿಸಿದರು. ಚುನಾವಣಾ ಆಯೋಗದ ಕಚೇರಿಗೆ ತೆರಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಸಂಸದರು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು..

ಬ್ಯಾರಿಕೇಡ್ ಏರಿದ ರಾಹುಲ್.

ಪೊಲೀಸರು ತಡೆದ ವೇಳೆ ರಾಹುಲ್ ಗಾಂಧಿ ಬ್ಯಾರಿಕೇಡ್ ಮೇಲೆ ಏರಿ ನಿಂತು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪೊಲೀಸರು ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು. ನಂತರ ಪ್ರಿಯಾಂಕಾ ಗಾಂಧಿ ಪೊಲೀಸ್ ಬಸ್‌ನಿಂದ ಇಳಿದು ರಾಹುಲ್ ಗಾಂಧಿ ಅವರೊಂದಿಗೆ ಸೇರಿಕೊಂಡರು. ಬಳಿಕ ರಾಹುಲ್, ಪ್ರಿಯಾಂಕಾ ಹಾಗೂ ದೀಪೇಂದರ್ ಹೂಡಾ ಸೇರಿದಂತೆ ಕೆಲವರು ಮರದ ಕೆಳಗೆ ಕುಳಿತು ಪ್ರತಿಭಟನೆ ಮುಂದುವರಿಸಿದರು.

‘ಜನಪ್ರತಿನಿಧಿಗಳಿಗೇ ಬಾಗಿಲು ಮುಚ್ಚಿದರೆ?’
ಪ್ರತಿಭಟನೆ ವೇಳೆ ಮಾತನಾಡಿದ ರಾಹುಲ್ ಗಾಂಧಿ, “ಚುನಾವಣಾ ಆಯೋಗದ ಕಚೇರಿ ಕೇವಲ 50 ಮೀಟರ್ ದೂರದಲ್ಲಿದ್ದರೂ ನಮ್ಮನ್ನು ಅಲ್ಲಿಗೆ ತೆರಳಲು ಬಿಡುತ್ತಿಲ್ಲ. 300 ಮಂದಿ ಚುನಾಯಿತ ಸಂಸದರು ಕಾಯುತ್ತಿದ್ದಾರೆ. ಜನಪ್ರತಿನಿಧಿಗಳಿಗೇ ಚುನಾವಣಾ ಆಯೋಗದ ಬಾಗಿಲು ಮುಚ್ಚಿದರೆ, ಜನಸಾಮಾನ್ಯರ ಗತಿಯೇನು? ಇದೇನಾ ಪ್ರಜಾಪ್ರಭುತ್ವ?” ಎಂದು ಪ್ರಶ್ನಿಸಿದರು.

ಪ್ರತಿಭಟನಕಾರರು “ಬಿಜೆಪಿಯೇ ಸಿಇಸಿ”, “ಮತ ಕಳ್ಳ–ಕುರ್ಚಿ ಬಿಡು”, “ಪ್ರಜಾಪ್ರಭುತ್ವ ಮಾರಾಟಕ್ಕಿಲ್ಲ” ಎಂಬ ಘೋಷಣೆಗಳನ್ನು ಕೂಗಿದರು. ಬಿಜೆಡಿ ಸಂಸದರೂ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ರಾಹುಲ್, ಪ್ರಿಯಾಂಕಾ ಸೇರಿ 250ಕ್ಕೂ ಹೆಚ್ಚು ಮಂದಿ ವಶಕ್ಕೆ ಆಕಾಶವಾಣಿ ಭವನದ ಬಳಿ ಪ್ರತಿಭಟನೆ ಮುಂದುವರಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ 250ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಇದರಿಂದ ವಿಪಕ್ಷಗಳ ಧರಣಿ ಅಂತ್ಯಗೊಂಡಿತು.

‘ಅರಾಜಕತೆ ಸೃಷ್ಟಿಸುವ ಯತ್ನ’ : ಶಿವರಾಜ್ ಸಿಂಗ್ ಚೌಹಾಣ್..

ವಿಪಕ್ಷಗಳ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ರಾಹುಲ್ ಗಾಂಧಿಯ ಪುನರುಜ್ಜೀವನಕ್ಕಾಗಿ ಐಎನ್‌ಡಿಐಎ ಕೂಟ ನಾಟಕವಾಡುತ್ತಿದೆ. ಸಾಂವಿಧಾನಿಕ ಸಂಸ್ಥೆಯ ವಿರುದ್ಧ ತಿರುಗಿ ಬಿದ್ದು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಯತ್ನಿಸುತ್ತಿವೆ” ಎಂದು ಆರೋಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular