ಮಂಗಳೂರು ; ಹಣದ ವಿಚಾರದಲ್ಲಿ ತಂಡವೊಂದು ವ್ಯಕ್ತಿಯನ್ನು ಅಪಹರಣ ಮಾಡಿ, ಸಹೋದರನ ಮಾಹಿತಿಯನ್ನು ಪಡೆಯುವ ಜತೆಗೆ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಕೊಯಿಲ ನಿವಾಸಿ ನಿಝಾಮ್ (25) ಹಾಗೂ ಸಹೋದರ ಸಂಬಂಧಿ ಶಾರೂಕ್ (23) ಇಬ್ಬರನ್ನು ಅಪಹರಣ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಅಪಹರಣಕಾರರು ಇಬ್ಬರಿಗೂ ಹಲ್ಲೆ ನಡೆಸಿದ್ದು ನಿಝಾಮ್ ಎಂಬಾತನ್ನನ್ನು ಬಿಟ್ಟು ಕಳುಹಿಸಿದ್ದು ಶಾರೂಕ್ ನನ್ನು ಕರೆದೊಯ್ದಿದ್ದಾರೆ ಎಂದು ನಿಝಾಮ್ ದೂರಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ನಿಝಾಮ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಿಝಾಮ್ ಸಹೋದರ ವಿದೇಶದಲ್ಲಿದ್ದು ಆತ ಸಾಲ ತೀರಿಸುವ ಸಲುವಾಗಿ ದೊಡ್ಡ ಮೊತ್ತದ ಹಣ ಕಳುಹಿಸಿದ್ದ ಎನ್ನಲಾಗಿದೆ. ಆ ಹಣಕ್ಕಾಗಿಯೇ ಈ ಅಪಹರಣ ನಡೆದಿದ್ದು ,ಮಂಗಳೂರಿನ ಭಾಗಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಹೋದರನ ಮಾಹಿತಿ ಪಡೆದು ಆತನನ್ನು ಅಪಹರಣ ಮಾಡಿ ಹಣ ತರದೇ ಹೋದರೆ ವಶದಲ್ಲಿ ಇರುವ ಶಾರೂಕ್ ನನ್ನು ಕೊಲೆ ಮಾಡುವುದಾಗಿ ಬೆಧರಿಸಿದ್ದಾರೆ ಎಂದು ನಿಝಾಮ್ ಹೇಳಿದ್ದಾರೆ. ಸದ್ಯ ನಿಝಾಮ್ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಕರಣದ ಬಗ್ಗೆ ಪೊಲೀಸರಿಗೂ ಅನುಮಾನ ಮೂಡಿದೆ. ಹೀಗಾಗಿ ನಿಝಾಮ್ ವಿಚಾರಣೆ ನಡೆಸಿರುವ ಪೊಲೀಸರು ಆತ ನೀಡಿದ ಹೇಳಿಕೆಯಲ್ಲಿ ಗೊಂದಲವಿರುವ ಕಾರಣ ಇನ್ನೂ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.