ಮಂಗಳೂರು : ಮಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆಡಳಿತ ಕಚೇರಿಯ ಜಂಟಿ ನಿರ್ದೇಶಕ ಸಿ.ಎಚ್. ಮೋಹನ್ ವಿರುದ್ಧ ಡಿ-ಗ್ರೂಪ್ ಗುತ್ತಿಗೆ ಮಹಿಳಾ ಸಿಬ್ಬಂದಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಸಂಘಟನೆಗಳು ಕಚೇರಿಗೆ ಭೇಟಿ ನೀಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದಲ್ಲಿ ಮಹಿಳಾ ಸಂಘಟನೆಗಳ ಸದಸ್ಯರು ಎಪಿಎಂಸಿ ಕಚೇರಿಗೆ ತೆರಳಿ, ಜಂಟಿ ನಿರ್ದೇಶಕ ಸಿ.ಎಚ್. ಮೋಹನ್ ಅವರನ್ನು ಭೇಟಿಯಾಗಿ ಆರೋಪಗಳ ಕುರಿತು ಪ್ರಶ್ನಿಸಿ, ಮಹಿಳಾ ಸಿಬ್ಬಂದಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ದೀರ್ಘಕಾಲ ಸಮಸ್ಯೆ ಅನುಭವಿಸಿದ ಬಳಿಕವೇ ಮಹಿಳಾ ಸಿಬ್ಬಂದಿ ದೂರು ನೀಡಿದ್ದಾರೆ. ದೂರು ತಡವಾಗಿ ಬಂದಿದೆ ಎಂಬ ಕಾರಣಕ್ಕೆ ಅದನ್ನು ತಳ್ಳಿಹಾಕದೆ, ಪ್ರಕರಣದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮಹಿಳಾ ಸಂಘಟನೆಗಳು ಆಗ್ರಹಿಸಿವೆ.
“ಮಹಿಳೆಯೊಬ್ಬರು ಯಾವುದೇ ಕಾರಣವಿಲ್ಲದೆ ಇಂತಹ ಗಂಭೀರ ಆರೋಪ ಮಾಡುವುದಿಲ್ಲ. ಸಮಸ್ಯೆ ಅನುಭವಿಸಿದ ಬಳಿಕವೇ ಧೈರ್ಯವಾಗಿ ಮುಂದೆ ಬಂದಿದ್ದಾರೆ. ಸಂತ್ರಸ್ತೆಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.
ಇದೇ ವೇಳೆ, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಜಂಟಿ ನಿರ್ದೇಶಕ ಸಿ.ಎಚ್. ಮೋಹನ್ ನಿರಾಕರಿಸಿದ್ದಾರೆ. “ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಗುತ್ತಿಗೆ ನೌಕರರ ವೇತನ ಪಾವತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಿಬ್ಬಂದಿಗೆ ಸಂಪೂರ್ಣ ವೇತನ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಯಾರಿಂದಲೂ ಹಣ ಪಡೆಯುವ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಮಹಿಳಾ ಸಂಘಟನೆಗಳು ಹೆಚ್ಚುವರಿ ಹಣದ ಆಮಿಷ ಹಾಗೂ ವೈಯಕ್ತಿಕ ಸೂಚನೆಗಳನ್ನು ನೀಡಿರುವ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿವೆ.
ಪ್ರತಿಭಟನೆಯ ವೇಳೆ ಎಪಿಎಂಸಿ ಕಚೇರಿ ಆವರಣದಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಮಹಿಳಾ ಸಂಘಟನೆಗಳ ಸದಸ್ಯರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.



