ಚೆನ್ನೈ : ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ತಮ್ಮ ಸರ್ಕಾರದಲ್ಲಿ ತಾವೊಬ್ಬರೇ “ಪವರ್ ಸೆಂಟರ್” ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿ, ಮೈತ್ರಿ ಪಕ್ಷಗಳು ಹಾಗೂ ಪ್ರತಿಪಕ್ಷಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ವಿಜಯ್, “ನನ್ನ ಆಡಳಿತದಲ್ಲಿ ಒಂದೇ ಒಂದು ಅಧಿಕಾರ ಕೇಂದ್ರ ಇರುತ್ತದೆ. ಅದು ನನ್ನ ನಾಯಕತ್ವದ ಕೇಂದ್ರ. ಇಲ್ಲಿ ಬೇರೆ ಬೇರೆ ಪವರ್ ಸೆಂಟರ್‌ಗಳು ಇರೋದಿಲ್ಲ” ಎಂದು ಹೇಳಿದರು.
ಈ ಮೂಲಕ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ವಿಸಿಕೆ, ಮುಸ್ಲಿಂ ಲೀಗ್ ಹಾಗೂ ಎಡಪಕ್ಷಗಳಿಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ತಮ್ಮ ಸಾಮಾನ್ಯ ಹಿನ್ನೆಲೆಯನ್ನು ಉಲ್ಲೇಖಿಸಿ, “ನಾನು ಯಾವುದೇ ರಾಜಕೀಯ ಕುಟುಂಬದಿಂದ ಬಂದವನಲ್ಲ. ಕಷ್ಟಪಟ್ಟು ಬದುಕು ಕಟ್ಟಿಕೊಂಡ ಸಾಮಾನ್ಯ ಸಹಾಯಕ ನಿರ್ದೇಶಕರ ಮಗ. ಬಡತನ, ಹಸಿವು ಏನು ಎಂಬುದು ನನಗೆ ಗೊತ್ತು. ನಾನು ನಿಮ್ಮಲ್ಲೊಬ್ಬ” ಎಂದು ಹೇಳಿದರು.
₹10 ಲಕ್ಷ ಕೋಟಿ ಸಾಲದ ಹೊರೆ ಆರೋಪ.
ತಮಿಳುನಾಡಿನ ಆರ್ಥಿಕ ಸ್ಥಿತಿ ಕುರಿತು ಮಾತನಾಡಿದ ವಿಜಯ್, “ಹಿಂದಿನ ಸರ್ಕಾರ ರಾಜ್ಯದ ಮೇಲೆ ₹10 ಲಕ್ಷ ಕೋಟಿಗೂ ಅಧಿಕ ಸಾಲದ ಹೊರೆ ಬಿಟ್ಟಿದೆ. ಖಜಾನೆ ಖಾಲಿಯಾಗಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇವೆ” ಎಂದು ಆರೋಪಿಸಿದರು. “ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ಆಡಳಿತ ಹಿಡಿದಿದ್ದೇವೆ. ನಾನು ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ. ಜನರು ಸ್ವಲ್ಪ ಸಮಯ ಕೊಡಬೇಕು” ಎಂದು ಮನವಿ ಮಾಡಿದರು.
ಸ್ಟಾಲಿನ್ ತಿರುಗೇಟು.
ವಿಜಯ್ ಆರೋಪಗಳಿಗೆ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತಿರುಗೇಟು ನೀಡಿದ್ದಾರೆ. “ತಮಿಳುನಾಡಿನ ಸಾಲದ ಮಟ್ಟ ಅನುಮತಿಸಲಾದ ಮಿತಿಯೊಳಗೇ ಇದೆ. ಸರ್ಕಾರದ ಬಳಿ ಹಣವಿಲ್ಲ ಎಂದು ಜನರನ್ನು ತಪ್ಪುದಾರಿಗೆಳೆಯಬೇಡಿ” ಎಂದು ಹೇಳಿದ್ದಾರೆ. ಫೆಬ್ರವರಿ ಬಜೆಟ್‌ನಲ್ಲೇ ರಾಜ್ಯದ ಆರ್ಥಿಕ ಸ್ಥಿತಿಯನ್ನು ವಿವರಿಸಿದ್ದೇವೆ. ಅದನ್ನೆಲ್ಲ ತಿಳಿದಿದ್ದರೂ ಜನರಿಗೆ ಭರವಸೆ ನೀಡಿದ್ದೀರಿ. ಈಗ ಸಮಸ್ಯೆಯನ್ನು ಬೇರೆಡೆಗೆ ತಳ್ಳಲು ಯತ್ನಿಸಬೇಡಿ ಎಂದು ಸ್ಟಾಲಿನ್ ಟೀಕಿಸಿದ್ದಾರೆ.
ರಾಹುಲ್–ವಿಜಯ್ ರೀಲ್‌ಗೆ ಇನ್‌ಸ್ಟಾಗ್ರಾಂ ನಿರ್ಬಂಧ ಆರೋಪ.
ಇದೇ ವೇಳೆ, ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ರಾಹುಲ್ ಗಾಂಧಿ ಹಾಗೂ ವಿಜಯ್ ಜೊತೆಯಲ್ಲಿದ್ದ ರೀಲ್ ಮತ್ತು ಫೋಟೋ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂ ಭಾರತದಲ್ಲಿ ನಿರ್ಬಂಧಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಒಂದು ಗಂಟೆಯೊಳಗೆ ಕೋಟ್ಯಾಂತರ ವೀಕ್ಷಣೆ ಪಡೆದಿದ್ದ ರೀಲ್‌ನ್ನು ಮೆಟಾ “Not Visible in India” ಎಂದು ತಡೆಹಿಡಿದಿದೆ. ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


