Monday, July 6, 2026
Homeಜಿಲ್ಲೆಮಂಗಳೂರು : ಬೈಕಂಪಾಡಿ ಬಳಿ ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ : 14 ಆರೋಪಿಗಳ ಫೋಟೋ...

ಮಂಗಳೂರು : ಬೈಕಂಪಾಡಿ ಬಳಿ ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ : 14 ಆರೋಪಿಗಳ ಫೋಟೋ ಬಿಡುಗಡೆ ; ಮಾಹಿತಿ ನೀಡಿದವರಿಗೆ ಬಹುಮಾನ.

ಮಂಗಳೂರು : ಮಂಗಳೂರಿನ ಬೈಕಂಪಾಡಿ ಸಮೀಪ ಚಿನ್ನದ ವ್ಯಾಪಾರಿ ಮೇಲೆ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ 14 ಆರೋಪಿಗಳ ಫೋಟೋಗಳನ್ನು ಮಂಗಳೂರು ನಗರ ಪೊಲೀಸರು ಬಿಡುಗಡೆ ಮಾಡಿದ್ದು, ಆರೋಪಿಗಳ ಬಂಧನಕ್ಕೆ ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಪುದುಚೇರಿಯ ಶಿಬಿನ್ ಗಂಗಾಧರನ್ ಈ ದರೋಡೆ ಪ್ರಕರಣದ ಪ್ರಮುಖ ರೂವಾರಿ ಎನ್ನಲಾಗಿದ್ದು, ಶ್ರೀರಾಗ್, ಅತುಲ್, ಮಿಥುನ್ ಲಾಲ್, ಅಜೀರ್ ತರಾಯಿಲ್, ವೈಶಾಖ್, ಅಸೀರ್ ಪಯ್ಯನ್ನೂರು, ಪ್ರಣವ್, ವಿಜಿಲ್ ಅಂಜರಕಂಡಿ, ಕೊಡಗಿನ ಉಬೈದ್, ಫಿರೋಜ್, ಮೊಯ್ದು ಅಬ್ಬಾಸ್, ಜಿಯಾದ್ ಹಾಗೂ ಜಮೀರ್ ಅಲಿಕಾ ಸೇರಿ ಒಟ್ಟು 14 ಆರೋಪಿಗಳನ್ನು ಗುರುತಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಕೇರಳದ ವಿವಿಧ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ.

ಆರೋಪಿಗಳು ಇನ್ನೂ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ, ಅವರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡುವವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದು, ಮಾಹಿತಿ ನೀಡುವವರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.

ಆರೋಪಿಗಳ ಫೋಟೋ ಮತ್ತು ವಿವರಗಳನ್ನು ಕರ್ನಾಟಕ ಹಾಗೂ ಕೇರಳದ ವಿವಿಧ ಪ್ರದೇಶಗಳಲ್ಲಿ ವಿತರಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಕೇರಳ ಪೊಲೀಸ್ ಸಹಯೋಗದೊಂದಿಗೆ ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರೂ ಆರೋಪಿಗಳ ಸುಳಿವು ಸಿಕ್ಕಿಲ್ಲ.

ಜೂನ್ 29ರ ಮುಂಜಾನೆ ಮಂಗಳೂರಿನ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು, 180 ಗ್ರಾಂ ಚಿನ್ನ ಹಾಗೂ ಸುಮಾರು ₹23 ಲಕ್ಷ ಮೌಲ್ಯದ ನಗದು ಮತ್ತು ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನೆರವು ನೀಡಿದ ಆರೋಪದಲ್ಲಿ ಈಗಾಗಲೇ ತಲಶೇರಿ ಮೂಲದ ನಿಮಿಲ್ ಹಾಗೂ ಮಡಿಕೇರಿಯ ಇರ್ಷಾದ್ ಮತ್ತು ಮುಸ್ತಫಾ ಅವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಪರಾರಿಯಾಗಿರುವ 14 ಆರೋಪಿಗಳ ಬಂಧನಕ್ಕಾಗಿ ಕೇರಳ ಹಾಗೂ ಕೊಡಗಿನಲ್ಲಿ ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular