Monday, May 11, 2026
Flats for sale
Homeವಾಣಿಜ್ಯನವದೆಹಲಿ : ಒಂದು ವರ್ಷ ದೇಶದ ಜನ ವಿದೇಶಿ ಪ್ರವಾಸ, ಚಿನ್ನ ಖರೀದಿ ಮಾಡಬೇಡಿ ಪ್ರಧಾನಿ...

ನವದೆಹಲಿ : ಒಂದು ವರ್ಷ ದೇಶದ ಜನ ವಿದೇಶಿ ಪ್ರವಾಸ, ಚಿನ್ನ ಖರೀದಿ ಮಾಡಬೇಡಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇಕೆ ..!

ನವದೆಹಲಿ : ಭಾರತ (India) ಮತ್ತು ಚಿನ್ನದ (Gold) ಸಂಬಂಧ ಸಾವಿರಾರು ವರ್ಷಗಳಷ್ಟು ಹಳೆಯದು. ಮದುವೆ, ಹಬ್ಬ, ಸಂಪ್ರದಾಯದಿಂದ ಹಿಡಿದು ಹೂಡಿಕೆವರೆಗೂ ಭಾರತೀಯರ ಜೀವನದಲ್ಲಿ ಬಂಗಾರಕ್ಕೆ ವಿಶೇಷ ಸ್ಥಾನವಿದೆ. ಆದರೆ, ಒಂದು ಕ್ಷಣ ದೇಶದ ಜನರು ಒಂದು ವರ್ಷದವರೆಗೆ ಚಿನ್ನ ಖರೀದಿಸದೇ ಇದ್ದರೆ ಏನಾಗಬಹುದು ಎಂದು ಊಹಿಸಿದರೆ, ಅದರ ಪರಿಣಾಮ ಆಭರಣ ಮಾರುಕಟ್ಟೆಗೆ ಮಾತ್ರ ಸೀಮಿತವಾಗುವುದಿಲ್ಲ. ದೇಶದ ಆರ್ಥಿಕತೆಯ ಮೇಲೆಯೇ ದೊಡ್ಡ ಪ್ರಭಾವ ಬೀಳಬಹುದು.ಇಡೀ ದೇಶದ ಆರ್ಥಿಕತೆ (Economy), ರೂಪಾಯಿ ಮೌಲ್ಯ ಮತ್ತು ವಿದೇಶಿ ವ್ಯಾಪಾರದಲ್ಲಿ ಒಂದು ದೊಡ್ಡ ಕ್ರಾಂತಿಯೇ ಸಂಭವಿಸಬಹುದು. 2025ರ ಅಂಕಿಅಂಶದ ಪ್ರಕಾರ ಭಾರತದ ಚಿನ್ನದ ಬೇಡಿಕೆ ಸುಮಾರು 710.9 ಟನ್‌ಗಳಷ್ಟಿತ್ತು. ಒಂದು ವರ್ಷ ಇದನ್ನು ತಡೆದರೆ ಏನಾಗಬಹುದು ಎಂಬ ರೋಚಕ ಮಾಹಿತಿ ಇಲ್ಲಿದೆ.

ರೂಪಾಯಿ ಮೌಲ್ಯ ಗಟ್ಟಿಯಾಗುವ ಸಾಧ್ಯತೆ ; ಭಾರತವು ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ. ಚಿನ್ನದ ಆಮದು ಕಡಿಮೆಯಾದರೆ ಡಾಲರ್‌ಗೆ ಇರುವ ಬೇಡಿಕೆ ಸಹಜವಾಗಿಯೇ ಇಳಿಕೆಯಾಗುತ್ತದೆ. ಇದರಿಂದ ರೂಪಾಯಿ (Rupee) ಮೌಲ್ಯ ಡಾಲರ್ ಎದುರು ಬಲವಾಗುವ ಸಾಧ್ಯತೆ ಇದೆ. ರೂಪಾಯಿ ಮೌಲ್ಯ ಹೆಚ್ಚಾದರೆ ಪೆಟ್ರೋಲ್, ಡೀಸೆಲ್ ಸೇರಿದಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಹಲವು ವಸ್ತುಗಳ ಬೆಲೆಯೂ ಇಳಿಕೆಯಾಗಬಹುದು. ಚಾಲ್ತಿ ಖಾತೆ ಕೊರತೆ (Current Account Deficit) ಕಡಿಮೆಯಾಗಲು ಇದೊಂದು ದೊಡ್ಡ ನೆರವಾಗಬಹುದು.

ಬ್ಯಾಂಕ್ ಮತ್ತು ಹೂಡಿಕೆ ಮಾರುಕಟ್ಟೆಗೆ ಲಾಭ.

ಭಾರತೀಯ ಕುಟುಂಬಗಳಲ್ಲಿ ಸಂಗ್ರಹವಾಗಿರುವ ಚಿನ್ನದ ಬಹುಪಾಲು ‘ಸುಪ್ತ ಆಸ್ತಿ’ಯಾಗಿ ಉಳಿಯುತ್ತದೆ. ಅಂದರೆ ಅದು ನೇರವಾಗಿ ಉತ್ಪಾದನೆ ಅಥವಾ ಉದ್ಯೋಗ ಸೃಷ್ಟಿಗೆ ನೆರವಾಗುವುದಿಲ್ಲ. ಜನರು ಚಿನ್ನದ ಬದಲು ಬ್ಯಾಂಕ್ ಠೇವಣಿ, ಎಸ್‌ಐಪಿ (SIP), ಮ್ಯೂಚುವಲ್ ಫಂಡ್ ಅಥವಾ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಬ್ಯಾಂಕುಗಳಿಗೆ ಹೆಚ್ಚಿನ ಬಂಡವಾಳ ಲಭ್ಯವಾಗುತ್ತದೆ. ಇದರಿಂದ ಕೈಗಾರಿಕೆಗಳಿಗೆ ಸಾಲ ಸಿಗಲು ಸುಲಭವಾಗಿ, ಹೊಸ ಉದ್ಯೋಗಾವಕಾಶಗಳು ಹೆಚ್ಚಾಗುವ ಸಾಧ್ಯತೆ ಇದೆ.

ಆಭರಣ ಉದ್ಯಮಕ್ಕೆ ದೊಡ್ಡ ಹೊಡೆತ.

ಇನ್ನೊಂದೆಡೆ, ಚಿನ್ನದ ಖರೀದಿ ಸಂಪೂರ್ಣ ಕುಸಿದರೆ ಭಾರತದ ಆಭರಣ ಉದ್ಯಮಕ್ಕೆ ಭಾರೀ ಸಂಕಷ್ಟ ಎದುರಾಗಬಹುದು. ಲಕ್ಷಾಂತರ ಅಕ್ಕಸಾಲಿಗರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರು ಈ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಮದುವೆ ಮತ್ತು ಹಬ್ಬದ ಸೀಸನ್‌ನಲ್ಲಿ ವ್ಯಾಪಾರ ಇಲ್ಲದಿದ್ದರೆ ಅನೇಕ ಕುಟುಂಬಗಳ ಜೀವನ ಸಂಕಷ್ಟಕ್ಕೆ ಸಿಲುಕಬಹುದು.

ಹೂಡಿಕೆ ಮನೋಭಾವದಲ್ಲಿ ಬದಲಾವಣೆ.

ಹೊಸ ಪೀಳಿಗೆ ಈಗ ಡಿಜಿಟಲ್ ಹೂಡಿಕೆಗಳತ್ತ ಹೆಚ್ಚು ಒಲವು ತೋರುತ್ತಿದೆ. ಚಿನ್ನದ ಮೇಲಿನ ಅವಲಂಬನೆ ಕಡಿಮೆಯಾದರೆ ಭಾರತೀಯರಲ್ಲಿ ಉತ್ಪಾದಕ ಹೂಡಿಕೆ ಸಂಸ್ಕೃತಿ ಹೆಚ್ಚಾಗಬಹುದು. ಇದರಿಂದ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗುವ ಸಾಧ್ಯತೆ ಇದೆ.

ಸಂಪ್ರದಾಯದ ಸವಾಲು.

ಭಾರತೀಯ ಸಮಾಜದಲ್ಲಿ ಚಿನ್ನ ಕೇವಲ ಹೂಡಿಕೆ ಅಲ್ಲ, ಅದು ಭಾವನೆ ಮತ್ತು ಸಂಸ್ಕೃತಿಯ ಭಾಗವಾಗಿದೆ. ಮದುವೆಗಳಲ್ಲಿ ಚಿನ್ನ ಅನಿವಾರ್ಯ ಎನ್ನುವ ಮನೋಭಾವ ಇನ್ನೂ ಬಲವಾಗಿದೆ. ಹೀಗಾಗಿ ಜನರನ್ನು ಚಿನ್ನದಿಂದ ದೂರ ಇಡುವುದು ಸುಲಭದ ವಿಷಯವಲ್ಲ. ಆದರೂ, ದೇಶದ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಉಳಿತಾಯದ ಒಂದು ಭಾಗವನ್ನು ಉತ್ಪಾದಕ ಹೂಡಿಕೆಗಳತ್ತ ತಿರುಗಿಸುವ ಅಗತ್ಯವಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular