Tuesday, July 21, 2026
Homeರಾಜ್ಯಶಿವಮೊಗ್ಗ : ಪಶ್ಚಿಮ ಘಟ್ಟಕ್ಕೆ ಕಂಟಕ..! ಆಗುಂಬೆಯ ಒಡಲು ಸೀಳಲಿದೆಯೇ ₹3,500 ಕೋಟಿ ರೂ. ಸುರಂಗ...

ಶಿವಮೊಗ್ಗ : ಪಶ್ಚಿಮ ಘಟ್ಟಕ್ಕೆ ಕಂಟಕ..! ಆಗುಂಬೆಯ ಒಡಲು ಸೀಳಲಿದೆಯೇ ₹3,500 ಕೋಟಿ ರೂ. ಸುರಂಗ ಯೋಜನೆ ..?

ಶಿವಮೊಗ್ಗ : ಕೇರಳದ ವಯನಾಡು ಭೂಕುಸಿತ ದುರಂತದ ನೆನಪು ಇನ್ನೂ ಮಾಸದಿರುವಾಗಲೇ, ಕರ್ನಾಟಕದ ಪಶ್ಚಿಮ ಘಟ್ಟದ ಹೃದಯಭಾಗವಾದ ಆಗುಂಬೆಯಲ್ಲಿ ಪ್ರಸ್ತಾವಿತ ₹3,500 ಕೋಟಿ ವೆಚ್ಚದ ಸುರಂಗ ಮಾರ್ಗ ಯೋಜನೆ ಮತ್ತೆ ಚರ್ಚೆಗೆ ಬಂದಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಅಪಾಯ ತರುವ ಯೋಜನೆಯೇ, ಅಥವಾ ಪರಿಸರ ರಕ್ಷಣೆಗೆ ನೆರವಾಗುವ ಪರ್ಯಾಯವೇ ಎಂಬ ಪ್ರಶ್ನೆ ಈಗ ರಾಜ್ಯದಾದ್ಯಂತ ಚರ್ಚೆಯಾಗುತ್ತಿದೆ. ಆಗುಂಬೆ ಸುರಂಗ ಯೋಜನೆಗೆ ಸಂಬಂಧಿಸಿದಂತೆ ರೈತ ಸಂಘಗಳು ಹಾಗೂ ಪರಿಸರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಸುರಂಗ ನಿರ್ಮಾಣ ಮಾಡಿದರೆ ಜೀವ ವೈವಿಧ್ಯ, ಜಲಮೂಲಗಳು ಹಾಗೂ ಭೂಸ್ಥಿರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ. “ವಯನಾಡು ದುರಂತದಿಂದ ಸರ್ಕಾರ ಪಾಠ ಕಲಿತಿಲ್ಲವೇ?” ಎಂಬ ಪ್ರಶ್ನೆಯನ್ನೂ ಪರಿಸರ ಪ್ರೇಮಿಗಳು ಎತ್ತಿದ್ದಾರೆ.

ಇನ್ನೊಂದೆಡೆ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಯೋಜನೆಗೆ ಸಂಬಂಧಿಸಿದಂತೆ ಬರುವ ಶುಕ್ರವಾರ ತಾಂತ್ರಿಕ ಪರಿಣಿತರೊಂದಿಗೆ ಮಹತ್ವದ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಆಗುಂಬೆ ಘಾಟ್ ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ ₹420 ಕೋಟಿ ಮಂಜೂರಾಗಿದ್ದು, ಅರಣ್ಯ ಇಲಾಖೆಯ ಅನುಮತಿ ದೊರೆತ ತಕ್ಷಣ ಕಾಮಗಾರಿ ವೇಗ ಪಡೆಯಲಿದೆ ಎಂದಿದ್ದಾರೆ.

ಸಂಸದರ ಪ್ರಕಾರ, ಪರಿಸರಕ್ಕೆ ಕನಿಷ್ಠ ಹಾನಿಯಾಗುವ ರೀತಿಯಲ್ಲಿ ಸುರಂಗ ಮಾರ್ಗ ನಿರ್ಮಾಣವಾದರೆ ಅದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಹಕಾರಿಯಾಗಬಹುದು. ಪರಿಸರವೂ ಉಳಿಯಬೇಕು, ಜನರ ಸುರಕ್ಷಿತ ಸಂಚಾರವೂ ಖಚಿತವಾಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ, ಆಗುಂಬೆ ಅತ್ಯಂತ ಸೂಕ್ಷ್ಮ ಭೂಪ್ರದೇಶವಾಗಿರುವುದರಿಂದ ಯಾವುದೇ ದೊಡ್ಡ ಕಾಮಗಾರಿ ಆರಂಭಿಸುವ ಮುನ್ನ ಸಮಗ್ರ ವೈಜ್ಞಾನಿಕ ಅಧ್ಯಯನ, ಪರಿಸರ ಪರಿಣಾಮ ಮೌಲ್ಯಮಾಪನ ಹಾಗೂ ಸಾರ್ವಜನಿಕರ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ.

ಅಭಿವೃದ್ಧಿಯ ಹಾದಿಯಲ್ಲಿ ಪರಿಸರವನ್ನು ಉಳಿಸಬಹುದೇ? ಅಥವಾ ಮಲೆನಾಡು ಮತ್ತೊಂದು ವಯನಾಡು ದುರಂತದ ಭೀತಿಯನ್ನು ಎದುರಿಸಬೇಕಾಗುತ್ತದೆಯೇ? ಇದೇ ಪ್ರಶ್ನೆಗೆ ಉತ್ತರ ಹುಡುಕುವ ಹಂತದಲ್ಲಿ ಆಗುಂಬೆ ಸುರಂಗ ಯೋಜನೆ ನಿಂತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular