ಚಿಕ್ಕಮಗಳೂರು : ನಗರದ ಮಾರ್ಕೆಟ್ ರಸ್ತೆಯಲ್ಲಿ ನಕಲಿ ನಾಟಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ನಗರ ಠಾಣೆ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ 30 ಕೆ.ಜಿಗೂ ಅಧಿಕ ನಕಲಿ ತುಪ್ಪ ಪತ್ತೆಯಾಗಿದೆ.
ಡಾಲ್ಡಾ ಹಾಗೂ ರಾಸಾಯನಿಕ ಪದಾರ್ಥಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಿ, ಅದನ್ನು ನಾಟಿ ತುಪ್ಪ ಎಂದು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅಧಿಕಾರಿಗಳು ದಾಳಿ ನಡೆಸುತ್ತಿದ್ದ ವೇಳೆ ದಂಧೆ ನಡೆಸುತ್ತಿದ್ದವರು ಮನೆಯ ಬಾಗಿಲು ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನಕಲಿ ತುಪ್ಪ ಹಾಗೂ ತಯಾರಿಕೆಗೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ಪ್ರದೇಶದಲ್ಲಿ ಕಳೆದ ವಾರವೂ ಪಾಳುಬಿದ್ದ ಮನೆಯೊಂದರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳ್ಳಾರಿ ಮೂಲದ ಒಂದೇ ತಂಡ ನಿರಂತರವಾಗಿ ಈ ರೀತಿಯ ದಂಧೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಘಟನೆ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

