ಮಂಡ್ಯ : ವಿಚಾರಣಾಧೀನ ಖೈದಿಗೆ ರಾಜಾತಿಥ್ಯ ನೀಡಿದ ಆರೋಪದ ಪ್ರಕರಣದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಜೈಲಿನಲ್ಲಿರುವ ಖೈದಿಗಳಿಗೆ ವಿವಿಧ ಸವಲತ್ತುಗಳನ್ನು ಕಲ್ಪಿಸಲು ಪ್ರತ್ಯೇಕವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಖೈದಿಗಳು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಪತ್ರದಲ್ಲಿ ಜೈಲಿನ ವಿವಿಧ ಸೆಲ್‌ಗಳಿಗೆ ಪ್ರತ್ಯೇಕ ‘ರೇಟ್’ ನಿಗದಿಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಸೆಲ್-1ರಿಂದ ಪ್ರತಿ ತಿಂಗಳು ₹10 ಸಾವಿರ, ಸೆಲ್-3 ಮತ್ತು ಸೆಲ್-4ರಿಂದ ತಲಾ ₹15 ಸಾವಿರ, ಸೆಲ್-5ರಿಂದ ₹5 ಸಾವಿರ ಹಾಗೂ ಸೆಲ್-6ರಿಂದ ₹8 ಸಾವಿರ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ರೂಂ ಬದಲಾವಣೆಗೆ ₹2 ಸಾವಿರ ಹಾಗೂ ಪನಿಷ್ಮೆಂಟ್ ಸೆಲ್‌ನಿಂದ ಹೊರಬರಲು ₹10 ಸಾವಿರ ನೀಡಬೇಕಾಗುತ್ತದೆ ಎಂಬ ಆರೋಪವೂ ಕೇಳಿಬಂದಿದೆ. ಸುಮಾರು 15 ಮಂದಿ ವಿಚಾರಣಾಧೀನ ಖೈದಿಗಳ UTP ಸಂಖ್ಯೆಗಳೊಂದಿಗೆ ಹೆಬ್ಬೆಟ್ಟು ಮುದ್ರೆ ಹಾಕಲಾಗಿದೆ ಎನ್ನಲಾದ ಪತ್ರದಲ್ಲಿ ಈ ಆರೋಪಗಳನ್ನು ಮಾಡಲಾಗಿದೆ.
ಮಟನ್, ಚಿಕನ್‌ಗೂ ‘ರೇಟ್’?
ಖೈದಿಗಳಿಂದ ಹಣ ವಸೂಲಿ ಮಾಡುವುದರ ಜೊತೆಗೆ, ಅವರ ಬೇಡಿಕೆಯಂತೆ ವಿಶೇಷ ಆಹಾರ ಸಿದ್ಧಪಡಿಸಿಕೊಡಲಾಗುತ್ತದೆ ಎಂಬ ಆರೋಪವೂ ಪತ್ರದಲ್ಲಿದೆ. ಮಟನ್ ಕೆಜಿಗೆ ₹1,250 ಹಾಗೂ ಚಿಕನ್ ಕೆಜಿಗೆ ₹700 ದರ ನಿಗದಿಪಡಿಸಿ ಹಣ ಪಡೆದು ಅಡುಗೆ ಮಾಡಿಸಿಕೊಡಲಾಗುತ್ತದೆ ಎಂದು ಆರೋಪಿಸಲಾಗಿದೆ.
ಜೈಲು ಅಧೀಕ್ಷಕಿ ಶಾಂತಮ್ಮ ಹಾಗೂ ಸಿಬ್ಬಂದಿಗಳಾದ ಅನಿಲ್, ಶಿವರಾಜ್ ಮತ್ತು ರವಿ ವಿರುದ್ಧ ಪತ್ರದಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಹಣ ನೀಡದಿದ್ದರೆ ‘ಕಮಾನು ಹತ್ತಿಸುವ’ ಬೆದರಿಕೆ ಹಾಕಲಾಗುತ್ತದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಆರೋಪಗಳ ಕುರಿತು ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಪತ್ರ ನೀಡಿ ತನಿಖೆ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಆದರೆ, ಡಿಜಿಪಿ ಅಲೋಕ್ ಕುಮಾರ್ ಹಾಗೂ ಜಿಐಜಿ (ಕಾರಾಗೃಹ) ದಿವ್ಯಶ್ರೀ ಅವರು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಪತ್ರವನ್ನು ನೀಡಲಾಗಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರದಲ್ಲಿನ ಆರೋಪಗಳ ಸತ್ಯಾಸತ್ಯತೆ ಅಧಿಕೃತವಾಗಿ ದೃಢಪಟ್ಟಿಲ್ಲ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆದ ಬಳಿಕವಷ್ಟೇ ಆರೋಪಗಳ ನೈಜತೆ ಸ್ಪಷ್ಟವಾಗಬೇಕಿದೆ.

