ಶಿವಮೊಗ್ಗ : ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ತುಂಗಾ ನದಿಗೆ ಹಾರಿರುವ ದುರಂತ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಸ್ಥಳೀಯ ಯುವಕರು ಸಮಯಪ್ರಜ್ಞೆ ಮೆರೆದು ಮಹಿಳೆ ಹಾಗೂ ಓರ್ವ ಮಗುವನ್ನು ರಕ್ಷಿಸಿದ್ದಾರೆ.
ನವೀನ್ ಹಾಗೂ ದಾದಾಪೀರ್ ಎಂಬ ಯುವಕರು ಜೀವದ ಹಂಗು ತೊರೆದು ನದಿಗೆ ಹಾರಿ ತಾಯಿ-ಮಗುವನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.
ರಕ್ಷಣೆಗೊಳಗಾದ ತಾಯಿ ಹಾಗೂ ಮಗುವನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಹಿಳೆಯೊಂದಿಗೆ ನದಿಗೆ ಹಾರಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿಹೋಗಿದ್ದು, ನಾಪತ್ತೆಯಾಗಿದ್ದಾರೆ. ಮಕ್ಕಳಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ತಾಯಿ ಕಣ್ಣೀರಿಡುತ್ತಾ “ನನ್ನ ಮಕ್ಕಳನ್ನು ರಕ್ಷಿಸಿ” ಎಂದು ಗೋಗರೆದಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮೂಲತಃ ಚಿತ್ರದುರ್ಗ ಜಿಲ್ಲೆಯವರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಪತ್ತೆಯಾಗಿರುವ ಇಬ್ಬರು ಮಕ್ಕಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

