ಮಂಗಳೂರು : 2015ರಲ್ಲಿ ಮಂಗಳೂರು ಸಬ್ ಜೈಲಿನಲ್ಲಿ ನಡೆದ ಮಾಡೂರು ಯುಸುಫ್ ಹತ್ಯೆ ಪ್ರಕರಣದ ತೀರ್ಪು ಇಂದು (ಸೆ.28) ಪ್ರಕಟವಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐವರು ಆರೋಪಿಗಳ ವಿರುದ್ಧ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು, ಐವರನ್ನು ಖುಲಾಸೆಗೊಳಿಸಿದೆ.
ಐವರು ಆರೋಪಿಗಳು ದೋಷಿಗಳು : ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಕ್ರಮಾಂಕ 92/2015ರ ಪ್ರಕರಣದಲ್ಲಿ ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್ ಹಾಗೂ ಉಮೇಶ್ ಕೊಂಬಾರ್ ವಿರುದ್ಧ ಆರೋಪ ಸಾಬೀತಾಗಿದೆ.
ನ್ಯಾಯಾಲಯವು ಈ ಐವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದು ಬಾಕಿಯಿದೆ.ಐವರು ಆರೋಪಿಗಳು ಖುಲಾಸೆ ಪ್ರಕರಣದಲ್ಲಿ ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಸತೀಶ್ ಪೂಜಾರಿ ಹಾಗೂ ಲತೀಶ್ ಅವರನ್ನು ನ್ಯಾಯಾಲಯ ಆರೋಪದಿಂದ ಖುಲಾಸೆಗೊಳಿಸಿದೆ. ಇವರಲ್ಲಿ ಸತೀಶ್ ಪೂಜಾರಿ ಈಗಾಗಲೇ ಮೃತಪಟ್ಟಿದ್ದಾರೆ.
2015ರಲ್ಲಿ ನಡೆದಿದ್ದ ಹತ್ಯೆ.
2015ರ ನವೆಂಬರ್ 2ರಂದು ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಸಬ್ ಜೈಲಿನಲ್ಲಿ ಮಾಡೂರು ಯುಸುಫ್ ಎಂಬಾತನ ಹತ್ಯೆ ನಡೆದಿತ್ತು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ IPC ಕಲಂ 143, 144, 147, 148, 353, 427, 302 ಜೊತೆಗೆ 149ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿದ ಅಂದಿನ ತನಿಖಾಧಿಕಾರಿ ಎಸಿಪಿ ತಿಲಕ್ ಚಂದ್ರ ಅವರು 2016ರ ಜನವರಿ 28ರಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆಯ ಬಳಿಕ ತೀರ್ಪು ಪ್ರಕರಣವು SC No.151/2021ರಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿತ್ತು. ಸುದೀರ್ಘ ವಿಚಾರಣೆಯ ಬಳಿಕ ಸೆ.28ರಂದು ತೀರ್ಪು ಪ್ರಕಟಗೊಂಡಿದ್ದು, ಐವರು ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.

