ಮಂಗಳೂರು : ಬಿ.ಸಿ.ರೋಡ್ ಚಲೋ ಪ್ರತಿಭಟನೆಯ ಬಳಿಕ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಭರತ್ ಕುಮ್ಡೇಲ್ ಸೇರಿದಂತೆ ಹಿಂದೂ ಕಾರ್ಯಕರ್ತರ ವಿರುದ್ಧದ ಪ್ರಕರಣಗಳು ಹಾಗೂ ತಮ್ಮ ವಿರುದ್ಧ ನೀಡಿರುವ ಪೊಲೀಸ್ ನೋಟಿಸ್ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಭರತ್ ಕುಮ್ಡೇಲ್ ಸೇರಿದಂತೆ ಕೆಲವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿರುವುದು ಹಾಗೂ ತಮ್ಮನ್ನು ವಿಚಾರಣೆಗೆ ಕರೆದಿರುವುದನ್ನು ಅವರು ಪ್ರಶ್ನಿಸಿದರು.
ಭರತ್ ಕುಮ್ಡೇಲ್ ಅವರೊಂದಿಗೆ ತಾವು ಫೋನ್‌ನಲ್ಲಿ ಮಾತನಾಡಿರುವುದನ್ನು ಉಲ್ಲೇಖಿಸಿದ ಪ್ರಭಾಕರ್ ಭಟ್, “ನಾನು ಭರತ್‌ಗೆ ಯಾರಿಗಾದರೂ ಹೊಡಿ ಅಂತ ಹೇಳಿದ್ದೇನಾ? ಕೊಲ್ಲು ಅಂತ ಹೇಳಿದ್ದೇನಾ? ಅಂತಹ ಸಂಭಾಷಣೆ ಪೊಲೀಸರಿಗೆ ಸಿಕ್ಕಿದೆಯೇ?” ಎಂದು ಪ್ರಶ್ನಿಸಿದರು.
“ನಾವು ಹತ್ಯೆಯನ್ನು ಪ್ರತಿಪಾದನೆ ಮಾಡುವುದಿಲ್ಲ. ಯಾವುದೇ ಸಂಬಂಧವಿಲ್ಲದ ಭರತ್ ಹಾಗೂ ಇತರರ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಲಾಗಿದೆ. 17 ಕೇಸ್‌ಗಳಿದ್ದವು ಎನ್ನಲಾಗುತ್ತಿತ್ತು, ಅದರಲ್ಲಿ 15 ಕೇಸ್‌ಗಳು ಬಿದ್ದು ಹೋಗಿವೆ. ಎರಡು ಕೇಸ್‌ಗಳಿಗೆ ಗೂಂಡಾ ಕಾಯ್ದೆ ಹಾಕುವುದೇ?” ಎಂದು ಅವರು ಪ್ರಶ್ನಿಸಿದರು.
ಭರತ್ ಕುಮ್ಡೇಲ್ ಬಂಧನದ ಬಳಿಕ ಅವರ ಕುಟುಂಬಕ್ಕೆ ಎದುರಾದ ಸಂಕಷ್ಟಗಳನ್ನೂ ಪ್ರಸ್ತಾಪಿಸಿದ ಭಟ್, ಕುಟುಂಬಸ್ಥರಿಗೆ ಸಹಾಯ ಮಾಡಿದವರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.
“ಕಾನೂನು ಬಿಟ್ಟು ಗೃಹ ಸಚಿವರು, ಮುಖ್ಯಮಂತ್ರಿ ಹೇಳುತ್ತಾರೆ ಎಂದು ಕೇಸ್ ಹಾಕಬಾರದು. ಪೊಲೀಸರು ಜನಸ್ನೇಹಿಯಾಗಬೇಕು. ಕೋರ್ಟ್‌ನಲ್ಲಿಯೂ ಪೊಲೀಸರಿಗೆ ತಪರಾಕಿ ಬಿದ್ದಿದೆ” ಎಂದು ಅವರು ಹೇಳಿದರು. ತಮ್ಮ ವಿರುದ್ಧವೂ ಗೂಂಡಾ ಕಾಯ್ದೆ ಜಾರಿಗೊಳಿಸುವ ಸಾಧ್ಯತೆಯ ಬಗ್ಗೆ ಮಾತನಾಡಿದ ಅವರು, “ನನ್ನ ಮೇಲೆ ಕೇಸ್ ಹಾಕುವುದೇ ದೊಡ್ಡ ವಿಷಯವಲ್ಲ. ಈ ಕೇಸ್ ನನ್ನ ಕೂದಲಿಗೆ ಸಮ. ತಾಕತ್ ಇದ್ದರೆ ನನ್ನನ್ನು ಗಲ್ಲಿಗೆ ಹಾಕಲಿ” ಎಂದು ಕಿಡಿಕಾರಿದರು.
ಮಂಪರು ಪರೀಕ್ಷೆ ನಡೆಸುವ ವಿಚಾರವನ್ನು ಪ್ರಶ್ನಿಸಿದ ಪ್ರಭಾಕರ್ ಭಟ್, “ಮಂಪರು ಪರೀಕ್ಷೆಗೆ ಯಾಕೆ ಒಪ್ಪಿಕೊಳ್ಳಬೇಕು? ಅದಕ್ಕೆ ಏನು ಆಧಾರವಿದೆ? ಮೊದಲು ಎಸ್‌ಪಿ ಅರುಣ್ ಕುಮಾರ್ ಮಂಪರು ಪರೀಕ್ಷೆ ಮಾಡಿಕೊಳ್ಳಲಿ” ಎಂದು ಹೇಳಿದರು. ತಾವು ಫೋನ್‌ನಲ್ಲಿ ಮಾತನಾಡಿರುವ ಕಾರಣಕ್ಕೆ ವಿಚಾರಣೆಗೆ ಕರೆಯಲಾಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, “ಮಾಧ್ಯಮಗಳು ಫೋನ್ ಮಾಡುತ್ತೀರಲ್ಲ, ನಿಮಗೂ ವಿಚಾರಣೆಗೆ ಕರೆಯುತ್ತಾರಾ?” ಎಂದು ಪ್ರಶ್ನಿಸಿದರು.
ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚಿಸಿರುವ ಕುರಿತು ಮಾತನಾಡಿದ ಭಟ್, ತನಿಖೆಯ ಬಗ್ಗೆ ತಮಗೆ ಕೆಲವು ಅನುಮಾನಗಳಿವೆ ಎಂದು ಹೇಳಿದರು.“SIT ರಚನೆಯಾಗಿರುವುದು ಒಳ್ಳೆಯದು. ಆದರೆ SITಯಲ್ಲಿರುವ ಎಲ್ಲಾ ಅಧಿಕಾರಿಗಳ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಲು ಸಾಧ್ಯವಿಲ್ಲ. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಒಳ್ಳೆಯ ಕಮಿಷನರ್. ಅವರ ಬಗ್ಗೆ ನಮಗೆ ವಿಶ್ವಾಸವಿದೆ. ಉಳಿದ ಅಧಿಕಾರಿಗಳ ಬಗ್ಗೆ ನಮಗೆ ಸಂಶಯವಿದೆ” ಎಂದು ಅವರು ಹೇಳಿದರು.
ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಸತ್ಯವನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ ಅವರು, “14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ. ಈ ಪ್ರಕರಣದಲ್ಲಿ ನೂರಕ್ಕೆ ನೂರು ಸತ್ಯ ಹೊರಬರಬೇಕು” ಎಂದರು.
ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದ ಕುರಿತು ಮಾತನಾಡಿದ ಪ್ರಭಾಕರ್ ಭಟ್, “ಅವರ ನಡುವಿನ ವೈಯಕ್ತಿಕ ಕಾರಣಗಳಿಂದ ಹತ್ಯೆಯಾಗಿದೆ. ವೈಯಕ್ತಿಕ ದ್ವೇಷವನ್ನು ಸಂಘಟನೆಗೆ ಯಾಕೆ ಕಟ್ಟಬೇಕು?” ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ತಮ್ಮ ವಿರುದ್ಧ ಪೊಲೀಸ್ ನೋಟಿಸ್ ನೀಡಿರುವುದು ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುವ ಮುನ್ನ ಭಟ್ ಅವರ ಹೇಳಿಕೆ ದಾಖಲಿಸಿಕೊಳ್ಳಲು ನೋಟಿಸ್ ನೀಡಲಾಗಿದೆ ಭಟ್ ಪರವಾಗಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಲಾಗಿದೆ.

