ವಾಷಿಂಗ್ಟನ್ : ಕೃತಕ ಬುದ್ಧಿಮತ್ತೆ (AI) ಕ್ಷೇತ್ರಕ್ಕೆ ಅತ್ಯಾಧುನಿಕ ಜಿಪಿಯು (GPU) ಚಿಪ್ಗಳನ್ನು ಪೂರೈಸುವ ಜಾಗತಿಕ ಟೆಕ್ ದೈತ್ಯ ಎನ್ವಿಡಿಯಾ (NVIDIA) ಸಂಸ್ಥೆಯ ಸಿಇಒ ಜೆನ್ಸನ್ ಹುವಾಂಗ್ ಅವರ ಕುರಿತು ಅಕ್ರಮ ಸಂಬಂಧ ಮತ್ತು ಬೇಹುಗಾರಿಕೆ ಆರೋಪಗಳು ಕೇಳಿಬಂದಿವೆ ಎಂಬ ವರದಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪತ್ನಿಗೆ ದ್ರೋಹವೆಸಗಿದ್ದಾಗಿ ಸಿಇಒ ಒಪ್ಪಿಕೊಂಡರೇ?
ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಅವರು ಆಲಿಸ್ ಹುವಾಂಗ್ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತಮ್ಮ ಪತ್ನಿ, ಮಕ್ಕಳು ಹಾಗೂ ಸಹೋದ್ಯೋಗಿಗಳಿಗೆ ಕ್ಷಮೆಯಾಚಿಸಿದ್ದಾರೆ ಎಂಬ ಮಾಹಿತಿ ವರದಿಯಲ್ಲಿ ಉಲ್ಲೇಖವಾಗಿದೆ.
‘ನನ್ನ ಪತ್ನಿಗೆ ದ್ರೋಹವೆಸಗಿದ್ದೇನೆ. ನನ್ನ ಈ ಕೃತ್ಯದಿಂದ ಪತ್ನಿ ಮತ್ತು ಮಕ್ಕಳಿಗೆ ತೀವ್ರ ನೋವುಂಟಾಗಿದೆ. ಹೂಡಿಕೆದಾರರು, ಆಡಳಿತ ಮಂಡಳಿ ಸದಸ್ಯರು ಹಾಗೂ ಉದ್ಯೋಗಿಗಳು ನನ್ನಿಂದ ಉತ್ತಮ ನಡವಳಿಕೆಯನ್ನು ನಿರೀಕ್ಷಿಸಿದ್ದರು. ಆದರೆ ನಾನು ಅದರಲ್ಲಿ ವಿಫಲನಾಗಿದ್ದೇನೆ’ ಎಂದು ಇ-ಮೇಲ್ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ವಿದೇಶಿ ಗುಪ್ತಚರ ಸಂಚಿನ ಶಂಕೆ: ತನಿಖಾ ಸಮಿತಿ ರಚನೆ!
ಈ ಬೆಳವಣಿಗೆಯ ಬೆನ್ನಲ್ಲೇ ಎನ್ವಿಡಿಯಾ ಆಡಳಿತ ಮಂಡಳಿ ತನಿಖೆಗೆ ಮುಂದಾಗಿದೆ ಎನ್ನಲಾಗಿದ್ದು, ಹುವಾಂಗ್ ಅವರು ವಿದೇಶಿ ಗುಪ್ತಚರ ಇಲಾಖೆಯ ಸಂಚಿಗೆ ಬಲಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ತನಿಖಾ ಸಮಿತಿ ರಚಿಸಲಾಗಿದೆ ಎಂಬ ವರದಿ ಹರಿದಾಡುತ್ತಿದೆ. ಆದರೆ, ಸಂಸ್ಥೆಯ ರಹಸ್ಯ ಮಾಹಿತಿ ಅಥವಾ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾದ ಬಗ್ಗೆ ಯಾವುದೇ ಪುರಾವೆಗಳು ಈವರೆಗೆ ಪತ್ತೆಯಾಗಿಲ್ಲ ಎನ್ನಲಾಗಿದೆ.ಈ ಬೆಳವಣಿಗೆ ಜಾಗತಿಕ ತಂತ್ರಜ್ಞಾನ ಮತ್ತು ಹೂಡಿಕೆ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಯಾರು ಈ ಆಲಿಸ್ ಹುವಾಂಗ್?
ವರದಿಯ ಪ್ರಕಾರ, ಆಲಿಸ್ ಸಿಂಗಾಪುರ ಮೂಲದ ದತ್ತಾಂಶ ಕೇಂದ್ರ ಸಂಸ್ಥೆ ಮೆಗಾಸ್ಪೀಡ್ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಎನ್ವಿಡಿಯಾದ ಅತ್ಯಾಧುನಿಕ AI ಚಿಪ್ಗಳ ತಂತ್ರಜ್ಞಾನ ರಹಸ್ಯಗಳನ್ನು ಚೀನಕ್ಕೆ ತಲುಪಿಸುವ ಉದ್ದೇಶದಿಂದ ಅವರನ್ನು ಬಳಸಿಕೊಳ್ಳಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಚೀನ ವಿರುದ್ಧ ಅಮೆರಿಕದ ಗಂಭೀರ ಆರೋಪ!
ಆಲಿಸ್ ಮೂಲಕ ಅಮೆರಿಕದ ರಹಸ್ಯ ತಂತ್ರಜ್ಞಾನ ಮಾಹಿತಿಗಳನ್ನು ಪಡೆದುಕೊಳ್ಳಲು ಚೀನ ಸಂಚು ರೂಪಿಸಿದೆ ಎಂಬ ಶಂಕೆಯನ್ನು ಅಮೆರಿಕದ ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.
ಆದರೆ, ಈ ಆರೋಪವನ್ನು ಚೀನ ತಳ್ಳಿಹಾಕಿದೆ. ಚೀನ ವಿರುದ್ಧದ ಬೇಹುಗಾರಿಕೆ ಆರೋಪಗಳು ಆಧಾರರಹಿತವಾಗಿದ್ದು, ಇದು ಅಪಪ್ರಚಾರದ ಭಾಗವಾಗಿದೆ ಎಂದು ಚೀನ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಜಾಗತಿಕ ಮಟ್ಟದಲ್ಲಿ ಕುತೂಹಲ
1993ರಲ್ಲಿ ಜೆನ್ಸನ್ ಹುವಾಂಗ್ ಅವರು ಮತ್ತಿಬ್ಬರು ಉದ್ಯಮಿಗಳೊಂದಿಗೆ ಎನ್ವಿಡಿಯಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇಂದು ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ಚಿಪ್ ಉತ್ಪಾದನಾ ಕ್ಷೇತ್ರದಲ್ಲಿ ಸಂಸ್ಥೆ ಜಾಗತಿಕ ಪ್ರಾಬಲ್ಯ ಹೊಂದಿದೆ. ವೈಯಕ್ತಿಕ ಸಂಬಂಧದ ವಿವಾದದಿಂದ ಆರಂಭವಾದ ಬೆಳವಣಿಗೆ ಇದೀಗ ಬೇಹುಗಾರಿಕೆ, ರಾಷ್ಟ್ರೀಯ ಭದ್ರತೆ ಮತ್ತು ಷೇರು ಮಾರುಕಟ್ಟೆಯ ಚರ್ಚೆಯವರೆಗೆ ತಲುಪಿದೆ ಎಂಬುದು ವರದಿಯ ಸಾರಾಂಶ.

