Tuesday, November 24, 2026
Homeವಿದೇಶನವದೆಹಲಿ : ಪ್ರವಾಹಪೀಡಿತ ನೇಪಾಲಕ್ಕೆ ಭಾರತದಿಂದ ₹15,000 ಕೋಟಿ ನೆರವು ಘೋಷಣೆ…!

ನವದೆಹಲಿ : ಪ್ರವಾಹಪೀಡಿತ ನೇಪಾಲಕ್ಕೆ ಭಾರತದಿಂದ ₹15,000 ಕೋಟಿ ನೆರವು ಘೋಷಣೆ…!

ನವದೆಹಲಿ : ಪ್ರವಾಹದಿಂದ ತತ್ತರಿಸಿರುವ ನೆರೆಯ ರಾಷ್ಟ್ರ ನೇಪಾಲದ ಪುನರ್‌ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಭಾರತ ಬರೋಬ್ಬರಿ ₹15,000 ಕೋಟಿ (24,000 ಕೋಟಿ ನೇಪಾಳಿ ರೂಪಾಯಿ) ನೆರವು ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಈ ನೆರವನ್ನು ಘೋಷಿಸಿದ್ದು, ಪ್ರಧಾನಿ ಹುದ್ದೆ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ನೇಪಾಲದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು.

8 ಕ್ಷೇತ್ರಗಳಲ್ಲಿ 18 ಒಪ್ಪಂದಗಳಿಗೆ ಸಹಿ

ಮೋದಿ ಮತ್ತು ಬಾಲೇಂದ್ರ ಶಾ ಅವರ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಆರೋಗ್ಯ, ಔಷಧ, ಉಪಗ್ರಹ ಸಂವಹನ, ತರಬೇತಿ, ನಗರಾಭಿವೃದ್ಧಿ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 18 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಾಲೇಂದ್ರ ಶಾ, ಉಭಯ ದೇಶಗಳ ನಡುವಿನ ಸಂಬಂಧಗಳು ಈ ಮಾತುಕತೆಯ ಬಳಿಕ ಹಿಮಾಲಯದಷ್ಟೇ ಎತ್ತರಕ್ಕೆ ಬೆಳೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ವಿವಿಧ ಸವಾಲುಗಳ ನಡುವೆಯೂ ಭಾರತವು ನೇಪಾಲಕ್ಕೆ ನಿರಂತರವಾಗಿ ಇಂಧನ ಮತ್ತು ರಸಗೊಬ್ಬರಗಳನ್ನು ಪೂರೈಸಿದೆ ಎಂದು ತಿಳಿಸಿದರು.

ಬಾಲೇಂದ್ರ ಶಾಗೆ ವಿಶೇಷ ಉಡುಗೊರೆ ನೀಡಿದ ಮೋದಿ

ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿರುವ ನೇಪಾಲ ಪ್ರಧಾನಿ ಬಾಲೇಂದ್ರ ಶಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಗಂಗಾಜಲ, ಬನಾರಸ್ ರೇಷ್ಮೆ ಶಾಲು ಹಾಗೂ ಆಂಧ್ರಪ್ರದೇಶದ ಪ್ರಸಿದ್ಧ ಕಲಂಕರಿ ಕಲೆಯಲ್ಲಿ ರಚಿಸಲಾದ ಸಂಪೂರ್ಣ ರಾಮಾಯಣ ಚಿತ್ರಕಲೆಯನ್ನು ಉಡುಗೊರೆಯಾಗಿ ನೀಡಲಾಗಿದೆ.

ನೇಪಾಲದಲ್ಲಿ ಐಐಟಿ ಕ್ಯಾಂಪಸ್ ಸ್ಥಾಪನೆ

ನೇಪಾಲದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಕ್ಯಾಂಪಸ್ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈ ಯೋಜನೆಯಿಂದ ನೇಪಾಲದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ ದೊರೆಯುವುದರ ಜತೆಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಅಯೋಧ್ಯೆ–ಜನಕಪುರ ನಡುವೆ ರೈಲು ಸಂಪರ್ಕಕ್ಕೆ ಚಾಲನೆ

ಭಾರತ ಮತ್ತು ನೇಪಾಲ ನಡುವಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಯೋಧ್ಯೆ ಮತ್ತು ನೇಪಾಲದ ಜನಕಪುರ ಧಾಮ್ ನಡುವಿನ ಗಡಿಯಾಚೆಗಿನ ಪ್ರಯಾಣಿಕರ ರೈಲು ಸಂಪರ್ಕಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಲೇಂದ್ರ ಶಾ ಹಸಿರು ನಿಶಾನೆ ತೋರಿದರು.

ಈ ಯೋಜನೆಯು ರಾಮನ ಜನ್ಮಭೂಮಿ ಅಯೋಧ್ಯೆ ಮತ್ತು ಸೀತೆಯ ಜನ್ಮಸ್ಥಳವೆಂದು ಪ್ರಸಿದ್ಧವಾಗಿರುವ ಜನಕಪುರದ ನಡುವಿನ ಸಂಪರ್ಕವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ, ಪ್ರವಾಹಪೀಡಿತ ನೇಪಾಲದ ಪುನರ್‌ನಿರ್ಮಾಣಕ್ಕೆ ಆರ್ಥಿಕ ನೆರವು, ಶಿಕ್ಷಣ, ಸಾರಿಗೆ ಹಾಗೂ ಇಂಧನ ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ–ನೇಪಾಲ ಸಂಬಂಧಕ್ಕೆ ಹೊಸ ವೇಗ ನೀಡುವ ಮಹತ್ವದ ಮಾತುಕತೆ ಇದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular