Tuesday, November 24, 2026
Homeಜಿಲ್ಲೆಮಂಗಳೂರು : ದಕ್ಷಿಣ ಕನ್ನಡ ಅಬಕಾರಿ ಇಲಾಖೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಭರ್ಜರಿ ಕಾರ್ಯಾಚರಣೆ :...

ಮಂಗಳೂರು : ದಕ್ಷಿಣ ಕನ್ನಡ ಅಬಕಾರಿ ಇಲಾಖೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಭರ್ಜರಿ ಕಾರ್ಯಾಚರಣೆ : ₹20.37 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತಿ!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ನವೆಂಬರ್ 23ರಂದು ಎರಡು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಹಾಗೂ ಸಾಗಾಟ ಮಾಡುತ್ತಿದ್ದ ಗೋವಾ ರಾಜ್ಯದ ಒಟ್ಟು 1,450.340 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಮದ್ಯ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ ₹20,37,340 ಆಗಿದೆ.

ಬಾಳ್ತಿಲದಲ್ಲಿ ₹7.72 ಲಕ್ಷ ಮೌಲ್ಯದ ಮದ್ಯ ಜಪ್ತಿ

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪಾಡಿಯಲ್ಲಿ ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ದಾಸ್ತಾನು ಮಾಡಿರುವ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು 180 ಮಿಲಿ ಸಾಮರ್ಥ್ಯದ ರಾಯಲ್ ಬ್ಲೂ ಮಾಲ್ಟ್ ವಿಸ್ಕಿಯ 146 ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು 1,261.440 ಲೀಟರ್ ಮದ್ಯ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹7,72,340 ಎಂದು ತಿಳಿದುಬಂದಿದೆ. ಅಮಿತ್ ಬಿನ್ ಅಣ್ಣು ಪೂಜಾರಿ ಅವರಿಗೆ ಸೇರಿದ ಜಾಗದಲ್ಲಿ ಸಂಪ್ರಿತ್ ಕಾಸರಗೋಡು ಎಂಬಾತನ ಸಹಭಾಗಿತ್ವದಲ್ಲಿ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಎರಡು ಕಾರುಗಳಲ್ಲಿ 188.9 ಲೀಟರ್ ಗೋವಾ ಮದ್ಯ ಸಾಗಾಟ

ಇನ್ನೊಂದು ಪ್ರಕರಣದಲ್ಲಿ ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪದ ಕಲ್ಲಡ್ಕ ಬಳಿ ಕೇರಳ ನೋಂದಣಿಯ ಎರಡು ಕಾರುಗಳಲ್ಲಿ ಯಾವುದೇ ಪರವಾನಗಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಗೋವಾ ಮದ್ಯವನ್ನು ಕೇರಳಕ್ಕೆ ಸಾಗಿಸುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು.

ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ಹುಂಡೈ i20 (KL-56-R-2927) ಮತ್ತು ಮಾರುತಿ ಸುಜುಕಿ ಸ್ವಿಫ್ಟ್ VDI (KL-14-H-7061) ಕಾರುಗಳನ್ನು ಪರಿಶೀಲಿಸಿದಾಗ 24 ಪೆಟ್ಟಿಗೆಗಳಲ್ಲಿ ಒಟ್ಟು 188.9 ಲೀಟರ್ ರಾಯಲ್ ಬ್ಲೂ ಮದ್ಯ ಪತ್ತೆಯಾಗಿದೆ.

ಈ ಪ್ರಕರಣದಲ್ಲಿ ಚಂದ್ರಶೇಖರ್ (ಅನ್ನು), ಸಫ್ವಾನ್ ಎಂ. ಹಾಗೂ ಮಹಮ್ಮದ್ ಶಾಫಿನ್ ಎಂಬುವವರು ಆರೋಪಿಗಳಾಗಿದ್ದು, ಮದ್ಯದೊಂದಿಗೆ ಸಾಗಾಟಕ್ಕೆ ಬಳಸಿದ್ದ ಎರಡೂ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಮದ್ಯ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ ₹12.65 ಲಕ್ಷ ಎಂದು ಅಂದಾಜಿಸಲಾಗಿದೆ.

ಹೆಜಮಾಡಿ ಟೋಲ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ದಾಳಿ

ಈ ಹಿಂದೆ ಹೆಜಮಾಡಿ ಟೋಲ್ ಬಳಿ ಗೋವಾ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದ ಇದೇ ಅಬಕಾರಿ ತಂಡ ಇದೀಗ ಮತ್ತೊಂದು ಕಾರ್ಯಾಚರಣೆ ನಡೆಸಿದೆ. ಹಿಂದಿನ ಪ್ರಕರಣದ ತನಿಖೆ ಮುಂದುವರಿಸಿದ ಅಧಿಕಾರಿಗಳು ಲಭ್ಯ ಮಾಹಿತಿಯ ಆಧಾರದಲ್ಲಿ ಅಕ್ರಮ ಮದ್ಯ ದಾಸ್ತಾನು ಮತ್ತು ಸಾಗಾಟದ ಜಾಲದ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿತರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 11, 14, 15, 38(ಎ), 40ರ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಲಂ 32ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ

ಅಬಕಾರಿ ಜಂಟಿ ಆಯುಕ್ತರಾದ ಸಿ. ಜಗದೀಶ್ ಅವರ ನಿರ್ದೇಶನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಬಂಟ್ವಾಳ ಮತ್ತು ಮಂಗಳೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕರು, ಉಪನಿರೀಕ್ಷಕರು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ತಂದು ದಾಸ್ತಾನು ಮಾಡುವುದು ಹಾಗೂ ಇತರ ರಾಜ್ಯಗಳಿಗೆ ಸಾಗಾಟ ಮಾಡುವ ಚಟುವಟಿಕೆಗಳ ವಿರುದ್ಧ ನಿರಂತರ ನಿಗಾ ವಹಿಸಲಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular