Thursday, November 26, 2026
Homeಸಿನಿಮಾಮಂಗಳೂರು : ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆಗೆ ‘ಮ್ಯಾರೇಜ್ ಪಾರ್ಟಿ’ ಸಿನಿಮಾ; ಕರಾವಳಿಯ ಕಲಾವಿದರ ಸಮಾಗಮದಲ್ಲಿ...

ಮಂಗಳೂರು : ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆಗೆ ‘ಮ್ಯಾರೇಜ್ ಪಾರ್ಟಿ’ ಸಿನಿಮಾ; ಕರಾವಳಿಯ ಕಲಾವಿದರ ಸಮಾಗಮದಲ್ಲಿ ಮೂಡಿಬಂದ ಕಾಮಿಡಿ ಹಾರರ್..!

ಮಂಗಳೂರು : ಕರಾವಳಿಯ ಪ್ರತಿಭಾವಂತ ಕಲಾವಿದರ ಸಂಗಮದಲ್ಲಿ ಮೂಡಿಬಂದಿರುವ ಹಾಸ್ಯ ಮತ್ತು ಹಾರರ್ ಕಥಾಹಂದರದ ‘ಮ್ಯಾರೇಜ್ ಪಾರ್ಟಿ’ ಕನ್ನಡ ಸಿನಿಮಾ ಡಿಸೆಂಬರ್ 4ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಶ್ರೀ ವಾರಾಹಿ ಫಿಲಂಸ್ ಲಾಂಛನದಲ್ಲಿ ಉದ್ಯಮಿ ಸಂತೋಷ್ ವಿ ನಿರ್ಮಿಸಿರುವ ಈ ಚಿತ್ರಕ್ಕೆ ಚಯನ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಹಾಗೂ ಟ್ರೈಲರ್‌ಗೆ ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಚಯನ್ ಶೆಟ್ಟಿ, “ಇದೊಂದು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ಕುಳಿತು ನೋಡಬಹುದಾದ ಸಿನಿಮಾ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಜನರು ಉತ್ತಮವಾಗಿ ಸ್ವೀಕರಿಸಿದ್ದಾರೆ. ಪ್ರೇಕ್ಷಕರ ಪ್ರೀತಿಯೊಂದಿಗೆ ಡಿಸೆಂಬರ್ 4ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ” ಎಂದು ತಿಳಿಸಿದರು.

ಖ್ಯಾತ ನಟ ನವೀನ್ ಡಿ. ಪಡೀಲ್ ಮಾತನಾಡಿ, ಕರಾವಳಿಯ ಸೊಬಗನ್ನು ಸಿನಿಮಾದ ಮೂಲಕ ಇಡೀ ರಾಜ್ಯಕ್ಕೆ ಪರಿಚಯಿಸಲು ಮುಂದಾಗಿರುವ ನಿರ್ಮಾಪಕರು ಹಾಗೂ ನಿರ್ದೇಶಕರ ಪ್ರಯತ್ನ ಶ್ಲಾಘನೀಯ ಎಂದರು. ಈ ಸಿನಿಮಾದಲ್ಲಿ ಕರಾವಳಿಯ ಹಲವು ಕಲಾವಿದರು ಅಭಿನಯಿಸಿದ್ದು, ಚಿತ್ರ ಉತ್ತಮವಾಗಿ ಮೂಡಿಬಂದಿದೆ. ವಿಶೇಷವಾಗಿ ಕಾಮಿಡಿ ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ವಿನೀತ್ ಕುಮಾರ್, ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾನಾಜೆ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ಅನನ್ಯ ಹಾಗೂ ರಕ್ಷಿತಾ ಪೂಜಾರಿ ಸೇರಿದಂತೆ ಕರಾವಳಿ ಭಾಗದ ಹಲವು ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ.

ಈಗಾಗಲೇ ಚಿತ್ರದ ‘ಗಲಾಟೆ’ ಹಾಗೂ ‘ಅಂದಾಗತಿಯೇ’ ಹಾಡುಗಳು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ. ಕಾಮಿಡಿ ಮತ್ತು ಹಾರರ್ ಮಿಶ್ರಿತ ಕಥೆಯೊಂದಿಗೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಚಿತ್ರತಂಡ ಸಜ್ಜಾಗಿದೆ.

ಈ ಹಿಂದೆ ಬಿಗ್‌ಬಾಸ್ ವಿಜೇತ ರೂಪೇಶ್ ಶೆಟ್ಟಿ ಅಭಿನಯದ ಚಿತ್ರವನ್ನು ನಿರ್ದೇಶಿಸಿದ್ದ ಚಯನ್ ಶೆಟ್ಟಿ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ‘ಸು ಫ್ರಮ್ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಶ್ರೀಕಾಂತ್ ಛಾಯಾಗ್ರಹಣ ಹಾಗೂ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ.

ಎಂಪಿ ಫಿಲಂಸ್ ಮೂಲಕ ಮುನೀಂದ್ರ ಅವರು ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕನ್ನಡದಲ್ಲಿ ಡಿಸೆಂಬರ್ 4ರಂದು ಬಿಡುಗಡೆಯಾಗಲಿರುವ ಸಿನಿಮಾ, ಎರಡು ವಾರಗಳ ಬಳಿಕ ಮಲಯಾಳಂ ಭಾಷೆಯಲ್ಲಿಯೂ ತೆರೆಕಾಣಲಿದೆ.

ಕಾರ್ಯಕ್ರಮದ ವೇದಿಕೆಯಲ್ಲಿ ನಿರ್ಮಾಪಕ ಸಂತೋಷ್ ವಿ, ನಿರ್ದೇಶಕ ಚಯನ್ ಶೆಟ್ಟಿ, ಭೀಮ್ ರಾವ್, ಜ್ಯೋತಿಷ್ ಶೆಟ್ಟಿ, ಅನನ್ಯ, ರಾಘವೇಂದ್ರ,ಪ್ರವೀಣ್, ಅನನ್ಯ, ರಘು ಪಾಂಡೇಶ್ವರ ಕಾರ್ತಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕರಾವಳಿಯ ಕಲಾವಿದರ ತಾರಾಗಣ, ಹಾಸ್ಯಮಯ ಸನ್ನಿವೇಶಗಳು ಹಾಗೂ ಹಾರರ್ ಕಥಾಹಂದರದೊಂದಿಗೆ ‘ಮ್ಯಾರೇಜ್ ಪಾರ್ಟಿ’ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular