ಮಂಗಳೂರು : ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ K. ಅಣ್ಣಾಮಲೈ ಪಕ್ಷ ತೊರೆದಿರುವ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗ್ರವಾಲ್ , ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೀರ್ಘಾವಧಿಯ ಯೋಜನೆಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಅಲ್ಪಾವಧಿಯ ರಾಜಕಾರಣದ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಅಣ್ಣಾಮಲೈ ಪಕ್ಷ ತೊರೆದಿರುವುದು ಅವರ ವೈಯಕ್ತಿಕ ನಿರ್ಧಾರ. ಈ ಸಂದರ್ಭದಲ್ಲಿ ಇಷ್ಟು ಮಾತ್ರ ಹೇಳಬಲ್ಲೆ” ಎಂದರು.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ರಾಜ್ಯದ ಎಲ್ಲಾ ರಾಜಕೀಯ ಬೆಳವಣಿಗೆಗಳು, ಹಾಲಿ ಅಧ್ಯಕ್ಷರ ಕಾರ್ಯವೈಖರಿ ಹಾಗೂ ಸಾಧನೆಗಳ ಬಗ್ಗೆ ವರಿಷ್ಠರಿಗೆ ಸಂಪೂರ್ಣ ಮಾಹಿತಿ ಇದೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಅಸಮಾಧಾನವಿದೆ ಎಂದು ಆರೋಪಿಸಿದ ಅಗರ್ವಾಲ್, 2028ರ ವಿಧಾನಸಭಾ ಚುನಾವಣೆಯಲ್ಲಿ ಅದರ ಪರಿಣಾಮ ಗೋಚರಿಸಲಿದೆ ಎಂದರು. ಬಿಜೆಪಿ ಯಾವುದೇ ಸಂವೇದನಾತ್ಮಕ ಅಥವಾ ತಲ್ಲಣ ಮೂಡಿಸುವ ರಾಜಕಾರಣ ಮಾಡದೇ, ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ವೈಫಲ್ಯಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ರಾಜ್ಯಸಭಾ ಟಿಕೆಟ್ ಕೈತಪ್ಪಿದ ಕುರಿತು ಮಾತನಾಡಿದ ಅವರು, ಸುಮಲತಾ ಅಂಬರೀಷ್ ಅವರೊಂದಿಗೆ ಬಿಜೆಪಿಯ ಉತ್ತಮ ಒಡನಾಟ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿಯಿಂದ ಉಚ್ಛಾಟನೆಗೊಂಡ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ K. S. ಈಶ್ವರಪ್ಪ ಅವರನ್ನು ಮರು ಸೇರ್ಪಡೆಗೊಳಿಸುವ ಕುರಿತು ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಯಾರನ್ನೂ ಶಾಶ್ವತವಾಗಿ ಪಕ್ಷದಿಂದ ದೂರವಿಡುವ ಉದ್ದೇಶ ಬಿಜೆಪಿಗಿಲ್ಲ. ಅವರ ವರ್ತನೆ ಮತ್ತು ನಡವಳಿಕೆಯನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಗರ್ವಾಲ್ ತಿಳಿಸಿದರು.


