ಬೆಳ್ತಂಗಡಿ : ತಾಲ್ಲೂಕಿನ ಬಾಲಂಜಾ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಗ್ರಹ ಧ್ವಂಸ ಮಾಡಿದ ಘಟನೆ ವರದಿಯಾಗಿದೆ. ಅಜಯ್ ಎಂಬ ವ್ಯಕ್ತಿ ದೇವಸ್ಥಾನಕ್ಕೆ ನುಗ್ಗಿ ದೇವರ ವಿಗ್ರಹಕ್ಕೆ ಹಾನಿ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ ಅಜಯ್ ಥಾರ್ ವಾಹನದಲ್ಲಿ ದೇವಸ್ಥಾನದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ಬಂದು ‘ಎನನ್ ಬಚಾವ್ ಮಾಲ್ಪಿ’ ಎಂದು ಕೂಗುತ್ತಾ ಒಳನುಗ್ಗಲು ಯತ್ನಿಸಿದ್ದಾನೆ. ಮನೆಯವರು ತಿರಸ್ಕರಿಸಿದ ಬಳಿಕ ಅಲ್ಲಿಂದ ತೆರಳಿದ್ದಾನೆ. ನಂತರ ದೇವಸ್ಥಾನದ ಜಲಕ ಕೆರೆಯಲ್ಲಿ ಹಾರಿ, ಅಲ್ಲಿಂದ ದೇವಸ್ಥಾನದ ಒಳಗೆ ಪ್ರವೇಶಿಸಿದ್ದಾನೆ. ಕಂಬದ ಮೂಲಕ ಮೇಲ್ಚಾವಣಿಗೆ ಹತ್ತಿ ಟೈಲ್ಸ್ ತೆಗೆದು ಒಳನುಗ್ಗಿ, ಕೊಡಮನಿತ್ತಾಯ ದೈವದ ಗುಡಿಯೊಳಗೆ ಇಳಿದು ವೇದಿಕೆಯಲ್ಲಿ ಇಟ್ಟಿದ್ದ ಘಂಟೆಯನ್ನು ತೆಗೆದು ಮೇಲ್ಚಾವಣಿ ಬಳಿ ಇಟ್ಟಿದ್ದಾನೆ.
ಇದಾದ ಬಳಿಕ ತೀರ್ಥ ಮಂಟಪದ ಬಳಿ ಇರುವ ದೊಡ್ಡ ಗಂಟೆಯನ್ನು ಬಾರಿಸಿ, ಗೋಪಾಲಕೃಷ್ಣ ದೇವರ ಗರ್ಭಗುಡಿಗೆ ನುಗ್ಗಿ ವಿಗ್ರಹವನ್ನು ಕೆಳಗೆ ಎಸೆದು ಒಡೆದಿದ್ದಾನೆ. ದೇವಾಲಯದ ಒಳಭಾಗದಲ್ಲಿದ್ದ ಇತರ ವಸ್ತುಗಳನ್ನೂ ಚದುರಿಸಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಜಯ್‌ನನ್ನು ವಿಚಾರಣೆ ನಡೆಸಿ, ಲಿಖಿತ ಭರವಸೆ ಪಡೆದು ಬಿಡುಗಡೆಗೊಳಿಸಿರುವುದಾಗಿ ತಿಳಿದುಬಂದಿದೆ.


