ಕೃಷ್ಣಾನಗರ್ (ಪ.ಬಂಗಾಳ ): ಪಶ್ಚಿಮ ಬಂಗಾಳದಲ್ಲಿ ೨ನೇ ಹಂತದ ಚುನಾವಣಾ ಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದು, ಎಂದಿನಂತೆ ಮತ್ತೆ ಮಮತಾ ಸರ್ಕಾರವನ್ನು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.
ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮೊನ್ನೆ ಝಲ್ಮುರಿ ತಿಂದಿದ್ದು ನಾನು, ಆದರೆ ಅದರ ಖಾರ ಹತ್ತಿದ್ದು ಮಾತ್ರ ಟಿಎಂಸಿಗೆ. ಅದರಲ್ಲೂ ಕೆಲವರಿಗೆ ಝಲ್ಮುರಿ ದೊಡ್ಡ ಆಘಾತವನ್ನೇ ನೀಡಿದೆ ಎನ್ನುವ ಮೂಲಕ ಮಮತಾ ಸರ್ಕಾರವನ್ನು ತಿವಿದರು. ಬಾಂಗ್ಲಾದೇಶದ ಅಕ್ರಮ ವಲಸಿಗರ ವಿಷಯವನ್ನು ಪ್ರಸ್ತಾಪಿಸಿದ ಮೋದಿ, ಅವರಿಗೆ ಆಶ್ರಯವನ್ನು ನೀಡುತ್ತಿರುವುದೇ ಟಿಎಂಸಿ ಸರ್ಕಾರ. ಆ ಮೂಲಕ ಬಂಗಾಳವನ್ನು ಅವರು ಮಹಾ ಜಂಗಲ್ ರಾಜ್ ಆಗಿ ಪರಿವರ್ತಿಸುತ್ತಿದ್ದಾರೆ ಎಂದು ಹೇಳಿದರು. ಮೇ 4ರಂದು ಬಂಗಾಳದಲ್ಲಿ ಬಿಜೆಪಿ ಗೆಲುವಿನ ಸಂಭ್ರಮಾಚರಣೆ ಆಗುತ್ತದೆ. ಆಗ ಬರೀ ಸಿಹಿಯನ್ನಷ್ಟೇ ಅಲ್ಲ, ಝಲ್ಮುರಿಯನ್ನೂ ಹಂಚಲಾಗುತ್ತದೆ ಎಂದರು.
ಮತುವಾ, ನಾಮಶುದ್ರ ಸಮುದಾಯ ಮತ್ತು ನಿರಾಶ್ರಿತ ಕುಟುಂಬಗಳು ಇನ್ನುಮುಂದೆ ಟಿಎಂಸಿಗೆ ಭಯಪಡುವ ಅಗತ್ಯವಿಲ್ಲ. ಈ ಬಗ್ಗೆ ಖಾತರಿ ಕೊಡುವುದಕ್ಕಂತಲೇ ನಾನು ಬಂದಿದ್ದೇನೆ. ಆಶ್ರಯ ಹಾಗೂ ಘನತೆಯನ್ನು ಕೋರಿ ಭಾರತಕ್ಕೇ ಬಂದಿರುವ (ಹಿAದೂಗಳು) ಎಲ್ಲರ ಪರ ನಾನು ನಿಲ್ಲುತ್ತೇನೆ. ನಮ್ಮ ಸರ್ಕಾರ ರಚನೆಯಾದ ಬಳಿಕ ಸಿಎಎ ಅಡಿಯಲ್ಲಿ ಪೌರತ್ವ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗುತ್ತದೆ. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಸಿಗುವ ಹಕ್ಕುಗಳು ಹಾಗೂ ಪ್ರಯೋಜನಗಳನ್ನು ನೀವೂ ಪಡೆಯುತ್ತೀರಿ ಎಂದು ಮೋದಿ ಹೇಳಿದರು. ಆ ಮೂಲಕ ಬಾಂಗ್ಲಾದೇಶದಿAದ ದೌರ್ಜನ್ಯಕ್ಕೊಳಗಾಗಿ ಬಂದಿರುವ ಹಿಂದೂಗಳಿಗೆ ಭರವಸೆ ನೀಡಿದರು.


