ಹಾವೇರಿ : ವಿವಾಹ ನಿಶ್ಚಿತಾರ್ಥವಾದ ರಾತ್ರಿಯೇ ಯುವತಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಹಾನಗಲ್ಲ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಡೆದಿದ್ದು, ಯುವತಿಯ ಕುಟುಂಬಸ್ಥರು ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿ ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿವಾಹ ನಿಶ್ಚಿತಾರ್ಥ ನಡೆದ ಬೆನ್ನಲ್ಲೇ ಯುವತಿಯನ್ನು ಅನ್ಯ ಕೋಮಿನ ಯುವಕನೊಬ್ಬ ಪುಸಲಾಯಿಸಿ ಲವ್ ಜಿಹಾದ್ಗೆ ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶಂಕ್ರಿಕೊಪ್ಪ ಗ್ರಾಮದ ಬಿಕಾಂ ಪದವೀಧರೆ ನಾಪತ್ತೆಯಾದ ಯುವತಿ. ಈಕೆಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಮೇ ೧೧ಕ್ಕೆ ಪಾಲಕರು ಮದುವೆ ಮಾಡಲು ನಿಶ್ಚಯಿಸಿದ್ದರು. ನಿಶ್ಚಿತಾರ್ಥ ನಡೆದ ರಾತ್ರಿ ಭಾವಿಪತಿಯೊಂದಿಗೆ ಫೋನ್ನಲ್ಲಿ ಮಾತನಾಡಿದ್ದ ಯುವತಿ, ತಡರಾತ್ರಿ ಮನೆಯ ಹಿಂಬದಿಯ ಬಾಗಿಲಿನಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬ ಯುವಕ ಈಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ. ಇದು ಲವ್ ಜಿಹಾದ್ ಪ್ರಯತ್ನ ಎಂದು ಕುಟುಂಬಸ್ಥರು ಹಾಗೂ ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಅಕ್ಕಿಆಲೂರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಯುವತಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ ಇಬ್ರಾಹಿಂ, ಮದುವೆಯ ಸಿದ್ಧತೆ ನಡೆಯುತ್ತಿದ್ದಾಗಲೇ ಈ ಕೃತ್ಯ ಎಸಗಿದ್ದಾನೆ. ಮಗಳ ನಾಪತ್ತೆಯಿಂದ ಕಂಗೆಟ್ಟ ತಾಯಿ, ನನ್ನ ಮಗಳನ್ನು ಹೇಗಾದರೂ ಮಾಡಿ ಮರಳಿ ಕರೆತನ್ನಿ ಎಂದು ಆಡೂರು ಪೊಲೀಸ್ ಠಾಣೆಯ ಮುಂದೆ ಕಣ್ಣೀರು ಹಾಕಿ ದೂರುಸಲ್ಲಿಸಿದ್ದಾರೆ. ನಾಪತ್ತೆಯಾದ ಯುವತಿ ಹಾಗೂ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

