ಹಾವೇರಿ : ಮಳೆ ಕೈಕೊಟ್ಟ ಪರಿಣಾಮ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಇದೀಗ ಬ್ಯಾಂಕ್‌ಗಳಿಂದ ಕೋರ್ಟ್ ಮೂಲಕ ಸಾಲ ಮರುಪಾವತಿ ನೋಟಿಸ್‌ಗಳು ಜಾರಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹಾವೇರಿ ತಾಲೂಕಿನ ತಿಮ್ಮೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರಿಗೆ ವಕೀಲರ ಮೂಲಕ ನೋಟಿಸ್ ಕಳುಹಿಸಲಾಗಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಮ್ಮೇನಹಳ್ಳಿ ಗ್ರಾಮದ ರೈತ ಸೋಮನಗೌಡ ಅವರಿಗೆ ಬ್ಯಾಂಕ್‌ನಿಂದ ನೋಟಿಸ್ ಬಂದ ಬಳಿಕ ತೀವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ರೈತರಲ್ಲಿ ಮತ್ತಷ್ಟು ಭಯ ಮತ್ತು ಆತಂಕವನ್ನುಂಟು ಮಾಡಿದೆ. ತಿಮ್ಮೇನಹಳ್ಳಿ ಗ್ರಾಮದಲ್ಲೇ 15ಕ್ಕೂ ಹೆಚ್ಚು ರೈತರಿಗೆ ನೋಟಿಸ್ ತಲುಪಿದ್ದು, ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆ ಒಣಗಿ ಹೋಗಿರುವ ಕಾರಣ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಸಾಲ ಪಡೆದಿದ್ದೇವೆ. ಆದರೆ ಬೆಳೆ ಕೈಗೂಡದ ಪರಿಸ್ಥಿತಿಯಲ್ಲಿ ಸಾಲ ಕಟ್ಟಲು ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದ್ದಾರೆ.
ಕೃಷಿ ಸಂಕಷ್ಟದ ನಡುವೆ ಈ ರೀತಿಯಾಗಿ ಕೋರ್ಟ್ ಮೂಲಕ ನೋಟಿಸ್ ಜಾರಿ ಮಾಡುವುದು ರೈತರನ್ನು ಇನ್ನಷ್ಟು ಮಾನಸಿಕ ಒತ್ತಡಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿರುವ ರೈತರು, ಸಾಲ ವಸೂಲಾತಿಗೆ ಕಾಲಾವಕಾಶ ನೀಡಬೇಕು ಹಾಗೂ ಸರ್ಕಾರ ಮಧ್ಯಪ್ರವೇಶಿಸಿ ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದ್ದಾರೆ.


