Tuesday, September 15, 2026
Homeದೇಶಮುಂಬೈ : 2029ರ ವೇಳೆಗೆ 21 ರಾಜ್ಯಗಳಲ್ಲಿ ಯುಸಿಸಿ ಜಾರಿ : ಅಮಿತ್ ಶಾ.

ಮುಂಬೈ : 2029ರ ವೇಳೆಗೆ 21 ರಾಜ್ಯಗಳಲ್ಲಿ ಯುಸಿಸಿ ಜಾರಿ : ಅಮಿತ್ ಶಾ.

ಮುಂಬೈ : ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಗಳು ಆಡಳಿತದಲ್ಲಿರುವ 21 ರಾಜ್ಯಗಳಲ್ಲಿ 2029ರ ವೇಳೆಗೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮುಂಬಯಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ಈಗಾಗಲೇ ಹಲವು ರಾಜ್ಯಗಳಲ್ಲಿ ಯುಸಿಸಿ ಜಾರಿಗೆ ತರಲಾಗಿದೆ. ಉಳಿದ ಎನ್‌ಡಿಎ ಆಡಳಿತದ ರಾಜ್ಯಗಳಲ್ಲೂ 2029ರ ವೇಳೆಗೆ ಯುಸಿಸಿ ಜಾರಿಗೆ ಬರುವ ವಿಶ್ವಾಸವಿದೆ ಎಂದರು.

ನ್ಯಾಯ ವ್ಯವಸ್ಥೆಗೆ ಭಾರತೀಯ ನ್ಯಾಯ ಸಂಹಿತೆಯಿಂದ ಬಲ
ಭಾರತೀಯ ನ್ಯಾಯ ಸಂಹಿತೆ ಜಾರಿಯಿಂದ ದೇಶದ ನ್ಯಾಯ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ ಎಂದು ಅಮಿತ್ ಶಾ ಹೇಳಿದರು. ಹಲವು ರಾಜ್ಯಗಳಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ಅಪರಾಧ ಸಾಬೀತು ಪ್ರಮಾಣ ಶೇ.30ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.

ನಕ್ಸಲ್‌ವಾದಕ್ಕೆ ಅಂತ್ಯ : ಕಳೆದ ಐದು ದಶಕಗಳಿಂದ ದೇಶವನ್ನು ಕಾಡುತ್ತಿದ್ದ ನಕ್ಸಲ್‌ವಾದಕ್ಕೆ ಕೇಂದ್ರ ಸರಕಾರ ಅಂತ್ಯ ಹಾಡಿದೆ ಎಂದು ಅಮಿತ್ ಶಾ ಹೇಳಿದರು. ಈಶಾನ್ಯ ಭಾರತದಲ್ಲಿ 14ಕ್ಕೂ ಹೆಚ್ಚು ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಶಾಂತಿ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

‘ವಸಾಹತುಶಾಹಿಯ ಇತಿಹಾಸವನ್ನು ಅಳಿಸುತ್ತೇವೆ’
ಬಿಜೆಪಿ ಇತಿಹಾಸವನ್ನು ಅಳಿಸುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ಅಮಿತ್ ಶಾ ತಳ್ಳಿಹಾಕಿದರು.

ಭಾರತೀಯ ದೃಷ್ಟಿಕೋನದಿಂದ, ಯಾವುದೇ ವಿರೂಪವಿಲ್ಲದೆ ದೇಶದ ಸಂಪೂರ್ಣ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಇದು ಇತಿಹಾಸ ಅಳಿಸುವುದಲ್ಲ, ವಸಾಹತುಶಾಹಿಯ ಪ್ರಭಾವದಿಂದ ಹೊರಬರುವ ಪ್ರಕ್ರಿಯೆ ಎಂದು ಅವರು ಹೇಳಿದರು.

2014ರವರೆಗೆ ಭ್ರಷ್ಟಾಚಾರ, ಜಾತಿವಾದ ಮತ್ತು ವಂಶಾವಳಿ ರಾಜಕಾರಣದ ಪಿಡುಗಿನಿಂದ ದೇಶ ಬಳಲುತ್ತಿತ್ತು. ನರೇಂದ್ರ ಮೋದಿ ನೇತೃತ್ವದ ಸರಕಾರ ಕಾರ್ಯಕ್ಷಮತೆಯ ರಾಜಕಾರಣಕ್ಕೆ ನಾಂದಿ ಹಾಡಿದೆ ಎಂದು ಅಮಿತ್ ಶಾ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular