Sunday, September 13, 2026
Homeದೇಶನವದೆಹಲಿ : ದಿಲ್ಲಿಯಲ್ಲಿ BRICS ಮಹಾಶೃಂಗ ; ಮೋದಿ–ಪುಟಿನ್ ಮಾತುಕತೆಗೆ ವಿಶೇಷ ಮಹತ್ವ.

ನವದೆಹಲಿ : ದಿಲ್ಲಿಯಲ್ಲಿ BRICS ಮಹಾಶೃಂಗ ; ಮೋದಿ–ಪುಟಿನ್ ಮಾತುಕತೆಗೆ ವಿಶೇಷ ಮಹತ್ವ.

ನವದೆಹಲಿ : ಭಾರತದಲ್ಲಿ 18ನೇ BRICS ಶೃಂಗಸಭೆ ಇಂದು ಆರಂಭವಾಗಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಮಹತ್ವದ ಶೃಂಗಸಭೆಗೆ ಹೊಸದಿಲ್ಲಿಯ ಭಾರತ ಮಂಟಪಂ ಸಜ್ಜಾಗಿದೆ. ಜಾಗತಿಕ GDPಯ ಸುಮಾರು ಶೇ.40ರಷ್ಟು ಪ್ರತಿನಿಧಿಸುವ BRICS ರಾಷ್ಟ್ರಗಳ ನಾಯಕರು ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಬಾರಿಯ ಶೃಂಗಸಭೆಯಲ್ಲಿ ಜಾಗತಿಕ ಆಡಳಿತ, ಬಹುಪಕ್ಷೀಯತೆ, ಆರ್ಥಿಕ ಸಹಕಾರ, ಜಾಗತಿಕ ಭದ್ರತೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಯುದ್ಧ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳ ನಡುವೆಯೇ ನಡೆಯುತ್ತಿರುವ ಈ ಸಭೆ ಜಾಗತಿಕ ಮಟ್ಟದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ.

ಭಾರತದ ಅಧ್ಯಕ್ಷತೆಯಲ್ಲಿ 4ನೇ BRICS ಶೃಂಗ.

ಭಾರತವು BRICS ಅಧ್ಯಕ್ಷತೆ ವಹಿಸಿಕೊಂಡಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ 2012, 2016 ಮತ್ತು 2021ರಲ್ಲಿ ಭಾರತ BRICS ಶೃಂಗಸಭೆಯ ಆತಿಥ್ಯ ವಹಿಸಿತ್ತು. ಈ ಬಾರಿಯ ಶೃಂಗಸಭೆಯ ಧ್ಯೇಯವಾಕ್ಯ “ಸ್ಥಿತಿಸ್ಥಾಪಕತ್ವ, ನಾವೀನ್ಯ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” ಎಂಬುದಾಗಿದೆ.

11 ರಾಷ್ಟ್ರಗಳ ನಾಯಕರು ಭಾಗಿ
ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಭಾರತ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ BRICS ಸದಸ್ಯ ರಾಷ್ಟ್ರಗಳಾಗಿವೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೋ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಭಾಗವಹಿಸಲಿದ್ದಾರೆ.

ಬ್ರೆಜಿಲ್ ಮತ್ತು ಸೌದಿ ಅರೇಬಿಯಾವನ್ನು ವಿದೇಶಾಂಗ ಸಚಿವರು ಪ್ರತಿನಿಧಿಸಲಿದ್ದಾರೆ. ಮಲೇಷ್ಯಾ, ವಿಯೆಟ್ನಾಂ ಪ್ರಧಾನಿಗಳು ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಕೂಡ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಮೋದಿ–ಪುಟಿನ್ ದ್ವಿಪಕ್ಷೀಯ ಮಾತುಕತೆ
BRICS ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಭಾರತ–ರಷ್ಯಾ ನಡುವಿನ ವ್ಯಾಪಾರವನ್ನು ₹10 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯ ಕುರಿತು ಚರ್ಚೆ ನಡೆದಿದೆ. ಪ್ರಸ್ತುತ ಉಭಯ ದೇಶಗಳ ನಡುವಿನ ವಾರ್ಷಿಕ ವಹಿವಾಟು ಸುಮಾರು ₹5.74 ಲಕ್ಷ ಕೋಟಿ ಇದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಮೆರಿಕದ ಪ್ರಾಬಲ್ಯಕ್ಕೆ ಪರ್ಯಾಯ ಶಕ್ತಿಯೇ BRICS?.

ಜಾಗತಿಕ ಆರ್ಥಿಕತೆ ಮತ್ತು ರಾಜಕೀಯದಲ್ಲಿ BRICS ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಶೃಂಗಸಭೆ ಮಹತ್ವ ಪಡೆದಿದೆ. ಅಮೆರಿಕ ಕೇಂದ್ರಿತ ಜಾಗತಿಕ ವ್ಯವಸ್ಥೆಗೆ ಪರ್ಯಾಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಹಕಾರವನ್ನು ಬಲಪಡಿಸುವ ಕುರಿತು BRICS ರಾಷ್ಟ್ರಗಳು ಚರ್ಚೆ ನಡೆಸುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular