ಮಂಗಳೂರು : ವಿದೇಶದಿಂದ ದುಬಾರಿ ಉಡುಗೊರೆಗಳ ಪಾರ್ಸೆಲ್ ಕಳುಹಿಸುವುದಾಗಿ ನಂಬಿಸಿ ಮಂಗಳೂರು ಮೂಲದ ಮಹಿಳೆಯೊಬ್ಬರಿಗೆ ಬರೋಬ್ಬರಿ ₹8.50 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ 2021ರಲ್ಲಿ ಸ್ಟಾರ್ಮೇಕರ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು ಸದಸ್ಯತ್ವ ಪಡೆದಿದ್ದರು. ಸುಮಾರು ಎರಡು ತಿಂಗಳ ಹಿಂದೆ ಈ ಆ್ಯಪ್ನಲ್ಲಿ ಕ್ರಿಸ್ ಪಾಮ್ಲ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯ ಪರಿಚಯವಾಗಿತ್ತು. ತಾನು ಯುನೈಟೆಡ್ ಕಿಂಗ್ಡಮ್ನಲ್ಲಿರುವುದಾಗಿ ಪರಿಚಯಿಸಿಕೊಂಡಿದ್ದ ಆತ, ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದ. ಬಳಿಕ +447516 106856 ಸಂಖ್ಯೆಯಿಂದ ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸುತ್ತಿದ್ದ.
ಈ ನಡುವೆ ಮಹಿಳೆ ತನ್ನ ಮಗುವಿನ ಹುಟ್ಟುಹಬ್ಬದ ಬಗ್ಗೆ ತಿಳಿಸಿದಾಗ, ಡಾಲರ್ ಕರೆನ್ಸಿ, ಚಿನ್ನಾಭರಣ ಸೇರಿದಂತೆ ದುಬಾರಿ ಉಡುಗೊರೆಗಳನ್ನು ಕಳುಹಿಸುವುದಾಗಿ ಆತ ಭರವಸೆ ನೀಡಿದ್ದ. ಉಡುಗೊರೆಗಳ ಫೋಟೋಗಳನ್ನು ವಾಟ್ಸ್ಆ್ಯಪ್ನಲ್ಲಿ ಕಳುಹಿಸಿ, ಡೆಲ್ಟಾ ಎಕ್ಸ್ಪ್ರೆಸ್ ಡೆಲಿವರಿ ಸರ್ವಿಸ್ ಮೂಲಕ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿದ್ದ.
ನವೆಂಬರ್ 9ರಂದು ಮಹಿಳೆಗೆ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಮುಂಬೈನ ಡೆಲ್ಟಾ ಎಕ್ಸ್ಪ್ರೆಸ್ ಡೆಲಿವರಿ ಸರ್ವಿಸ್ನ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಯುನೈಟೆಡ್ ಕಿಂಗ್ಡಮ್ನಿಂದ ಪಾರ್ಸೆಲ್ ಬಂದಿರುವುದಾಗಿ ತಿಳಿಸಿದ್ದ. ಪಾರ್ಸೆಲ್ ಬಿಡುಗಡೆ ಮಾಡಲು ಸರ್ವಿಸ್ ಶುಲ್ಕ, ಭಾರತ ಸರಕಾರದ ಆದಾಯ ತೆರಿಗೆ ಹಾಗೂ ಆ್ಯಂಟಿ ಟೆರರಿಸ್ಟ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಹೆಸರಿನಲ್ಲಿ ಹಣ ಪಾವತಿಸುವಂತೆ ಸೂಚಿಸಿದ್ದ.
ಇದನ್ನು ನಂಬಿದ ಮಹಿಳೆ ಅಪರಿಚಿತರು ನೀಡಿದ ಬ್ಯಾಂಕ್ ಖಾತೆಗಳಿಗೆ ನವೆಂಬರ್ 13ರಿಂದ 20ರವರೆಗೆ ಹಂತ ಹಂತವಾಗಿ ಒಟ್ಟು ಸುಮಾರು ₹8.50 ಲಕ್ಷ ಪಾವತಿಸಿದ್ದರು. ಆದರೆ ಹಣ ಪಾವತಿಸಿದ ಬಳಿಕವೂ ಪಾರ್ಸೆಲ್ ಸಿಗದೆ, ಆರೋಪಿಗಳಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತು ಮಂಗಳೂರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಮೂಲಕ ದೂರು ದಾಖಲಿಸಿ.

