ಮಂಗಳೂರು : ವಿಶ್ವಹಿಂದೂ ಪರಿಷತ್‌ನ ಪ್ರಕಲ್ಪವಾಗಿ 25 ವರ್ಷಗಳ ಹಿಂದೆ ಆರಂಭಗೊಂಡ ಪಜೀರು ಗೋವನಿತಾಶ್ರಯ ಟ್ರಸ್ಟ್ ಇದೀಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ.
ಕೇವಲ ಬೆರಳೆಣಿಕೆಯಷ್ಟು ದನಕರುಗಳೊಂದಿಗೆ ಆರಂಭಗೊಂಡ ಗೋಶಾಲೆಯಲ್ಲಿ ಇಂದು 500ಕ್ಕೂ ಅಧಿಕ ಗೋವುಗಳು ಹಾಗೂ ಎತ್ತುಗಳನ್ನು ಸಂರಕ್ಷಿಸಲಾಗುತ್ತಿದೆ. ಗೋವುಗಳ ಅಕ್ರಮ ಸಾಗಾಟ ಮತ್ತು ಗೋವಧೆಯ ವಿರುದ್ಧ ಹೋರಾಡುತ್ತಾ, ಗೋಸಂರಕ್ಷಣೆ ಹಾಗೂ ಗೋಸಂವರ್ಧನೆಯ ನಿರಂತರ ಸೇವೆಯಲ್ಲಿ ಟ್ರಸ್ಟ್ ತೊಡಗಿಸಿಕೊಂಡಿದೆ.
ಟ್ರಸ್ಟ್‌ನ ಬೆಳ್ಳಿಹಬ್ಬದ ಅಂಗವಾಗಿ ಇದೇ ನವೆಂಬರ್ 15 ಮತ್ತು 16ರಂದು ಪಜೀರಿನ ಗೋಶಾಲಾ ವಠಾರದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ. ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.
ನ.15ರಂದು ಗೋವಿಗಾಗಿ ಹೊರೆಕಾಣಿಕೆ, ಗೋಪೂಜೆ
ನವೆಂಬರ್ 15ರಂದು ಭಾನುವಾರ ಅಪರಾಹ್ನ 2.30ಕ್ಕೆ ಕದ್ರಿ ಶ್ರೀ ಕ್ಷೇತ್ರದಿಂದ ‘ಗೋವಿಗಾಗಿ ಹೊರೆಕಾಣಿಕೆ’ ಅರ್ಪಣೆಯ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ ಪಜೀರಿನ ಗೋಶಾಲಾ ವಠಾರದಲ್ಲಿ ಗೋಪೂಜೆ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ನ.16ರಂದು ಚಂಡಿಕಾಯಾಗ, ವಿಚಾರಗೋಷ್ಠಿ
ನವೆಂಬರ್ 16ರಂದು ಸೋಮವಾರ ಪೂರ್ವಾಹ್ನ ಗೋಶಾಲಾ ವಠಾರದಲ್ಲಿ ಶ್ರೀ ಚಂಡಿಕಾಯಾಗ, ಅನ್ನಸಂತರ್ಪಣೆ ಹಾಗೂ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ನಡೆಯಲಿದೆ.
ಅಪರಾಹ್ನ 3ರಿಂದ 5ರವರೆಗೆ ‘ಗೋಸಂರಕ್ಷಣೆ: ಸವಾಲುಗಳು ಹಾಗೂ ಪರಿಹಾರ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಆಯೋಜಿಸಲಾಗಿದೆ. ಬಳಿಕ ಸಭಾ ಕಾರ್ಯಕ್ರಮ ಹಾಗೂ ಶಾರದಾ ವಿದ್ಯಾಸಂಸ್ಥೆಯ ವತಿಯಿಂದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮ ನಡೆಯಲಿದೆ.
ಎರಡು ದಿನಗಳ ಕಾರ್ಯಕ್ರಮಗಳಿಗೆ ಎಲ್ಲಾ ಗೋಪ್ರೇಮಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಟ್ರಸ್ಟ್ ವತಿಯಿಂದ ಆಹ್ವಾನಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ಅನಂತಕೃಷ್ಣ ಭಟ್, ಅಧ್ಯಕ್ಷರು, ಎಚ್.ಕೆ. ಪುರುಷೋತ್ತಮ್, ಕಾರ್ಯದರ್ಶಿ, ಮನೋಹರ್ ಸುವರ್ಣ, ಕೋಶಾಧಿಕಾರಿ, ಶರಣ್ ಪಂಪವೆಲ್, ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

