ಮಂಗಳೂರು : ಮಳೆ ಕೊರತೆಯಿಂದ ಭತ್ತ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಇದೀಗ ಕರಾವಳಿ ಭಾಗದಲ್ಲಿ ಅಂದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಭಾಗದ ತೆಂಗಿನ ಬೆಳೆಗೂ ರೋಗಬಾಧೆ ಕಾಣಿಸಿಕೊಂಡಿದೆ. ಹಸಿರಿನಿಂದ ಕಂಗೊಳಿಸಬೇಕಿದ್ದ ತೆಂಗಿನ ಮರಗಳ ಗರಿಗಳು ಕೆಂಪಾಗಿ, ಕ್ರಮೇಣ ಒಣಗಿ ಕರಟಿ ಹೋಗುತ್ತಿವೆ. ಈಗಾಗಲೇ 300ಕ್ಕೂ ಅಧಿಕ ತೆಂಗಿನ ಮರಗಳಿಗೆ ರೋಗಬಾಧೆ ಕಾಣಿಸಿಕೊಂಡಿದ್ದು, ರೋಗ ಮತ್ತಷ್ಟು ಪ್ರದೇಶಗಳಿಗೆ ಹರಡುವ ಆತಂಕ ರೈತರನ್ನು ಕಾಡುತ್ತಿದೆ.
ಕರಾವಳಿ ಭಾಗದಲ್ಲಿ ತೆಂಗಿನ ಮರಗಳಿಗೆ ಕಾಣಿಸಿಕೊಂಡಿರುವ ಈ ವಿಚಿತ್ರ ರೋಗದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸೊಂಪಾಗಿ ಬೆಳೆದಿದ್ದ ತೆಂಗಿನ ಮರಗಳ ಗರಿಗಳು ಕೆಂಪು ಬಣ್ಣಕ್ಕೆ ತಿರುಗಿ, ಕ್ರಮೇಣ ಒಣಗುತ್ತಿವೆ. ರೋಗಬಾಧಿತ ಮರಗಳಲ್ಲಿ ಹಸಿರು ಬಣ್ಣ ಮಾಯವಾಗುತ್ತಿದ್ದು, ತೆಂಗಿನ ಕಾಯಿಗಳು ಉದುರಿ ಬೀಳುತ್ತಿವೆ. ಹೊಸ ಗರಿಗಳು ಮೂಡದೆ ಮರಗಳು ಸೊರಗುತ್ತಿವೆ.
ಗರಿಗಳ ತುದಿಯಿಂದ ಆರಂಭವಾಗುವ ಒಣಗುವಿಕೆ ಕ್ರಮೇಣ ಮರದ ಸುಳಿ ಭಾಗದವರೆಗೂ ವ್ಯಾಪಿಸುತ್ತಿದ್ದು, ತೆಂಗಿನ ಮರಗಳು ಸಂಪೂರ್ಣವಾಗಿ ಒಣಗಿ ಹಾಳಾಗುವ ಆತಂಕ ಎದುರಾಗಿದೆ. ಈಗಾಗಲೇ 300ಕ್ಕೂ ಅಧಿಕ ಮರಗಳಿಗೆ ರೋಗಬಾಧೆ ಕಾಣಿಸಿಕೊಂಡಿದ್ದು, ಸುಮಾರು 20 ಎಕರೆಗೂ ಅಧಿಕ ಪ್ರದೇಶಕ್ಕೆ ರೋಗ ಹರಡುವ ಭೀತಿ ಎದುರಾಗಿದೆ.
ತೆಂಗಿನ ಬೆಳೆ ಹಲವು ರೈತ ಕುಟುಂಬಗಳ ಜೀವನಾಧಾರವಾಗಿದ್ದು, ಕಣ್ಣೆದುರೇ ಮರಗಳು ಒಣಗುತ್ತಿರುವುದನ್ನು ಕಂಡು ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ಒಂದು ಮರಕ್ಕೆ ಕಾಣಿಸಿಕೊಂಡಿರುವ ರೋಗ ಸುತ್ತಮುತ್ತಲಿನ ಮರಗಳಿಗೂ ಹರಡುವ ಸಾಧ್ಯತೆ ಇರುವುದರಿಂದ ರೈತರಲ್ಲಿ ಭಯ ಹೆಚ್ಚಾಗಿದೆ.
ರೋಗಬಾಧೆಗೆ ನಿಖರ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೋಗದ ಮೂಲ ಕಾರಣ ಪತ್ತೆಹಚ್ಚಿ, ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ರವೀಂದ್ರ ಗುಜ್ಜರಬೆಟ್ಟು ಆಗ್ರಹಿಸಿದ್ದಾರೆ.
ಅಲ್ಲದೆ, ರೋಗದಿಂದ ಹಾನಿಗೊಳಗಾದ ತೆಂಗು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ರೋಗ ಮತ್ತಷ್ಟು ಪ್ರದೇಶಗಳಿಗೆ ಹರಡದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ಕರಾವಳಿಯ ರೈತರ ಬದುಕಿಗೆ ಆಧಾರವಾಗಿದ್ದ ತೆಂಗಿನ ಮರಗಳೇ ಇದೀಗ ಆತಂಕದ ಮೂಲವಾಗಿವೆ. ಸಂಬಂಧಪಟ್ಟ ಇಲಾಖೆಗಳು ಕೂಡಲೇ ಎಚ್ಚೆತ್ತುಕೊಂಡು ರೋಗದ ಕಾರಣ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಂಡರೆ ಮಾತ್ರ ತೆಂಗು ಬೆಳೆಗಾರರ ಆತಂಕ ದೂರವಾಗಲಿದೆ.

