ಮಂಗಳೂರು : ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತಬೈಲ್ನಲ್ಲಿ ಮನೆಗೆ ಜೆಸಿಬಿ ಬಳಸಿ ಹಾನಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 35 ವರ್ಷಗಳಿಂದ ಮನೆಯಲ್ಲಿ ವಾಸವಾಗಿರುವ ಕುಟುಂಬಕ್ಕೆ ಜಾಗ ಖಾಲಿ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಜಾರಿಯೋ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಲತಃ ಕೇರಳದವರಾದ ಸಿ.ಜೆ. ಜೋಯ್ ಅವರು ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಪತ್ನಿ ಲಿಜಿಮೋಲ್ ಜೊತೆ ಹಲವು ವರ್ಷಗಳಿಂದ ಕುಂಜತ್ತಬೈಲ್ನ ಸರ್ಕಾರಿ ನಿವೇಶನದಲ್ಲಿ ನಿರ್ಮಿಸಿರುವ ಮನೆಯಲ್ಲಿ ವಾಸವಾಗಿದ್ದಾರೆ. ಜಾಗ ಖಾಲಿ ಮಾಡುವಂತೆ ಕೆಲಕಾಲದಿಂದ ಒತ್ತಡ ಹಾಗೂ ಕಿರುಕುಳ ನೀಡಲಾಗುತ್ತಿತ್ತು ಎಂದು ಹೇಳಿದರು.
ಮನೆಯ ಅಡಿಪಾಯದ ಬಳಿ ಜೆಸಿಬಿಯಿಂದ ಮಣ್ಣು ಅಗೆದ ಆರೋಪ ಸೆಪ್ಟೆಂಬರ್ 3ರಂದು ಜೋಯ್ ದಂಪತಿ ಮನೆಯಲ್ಲಿ ಇಲ್ಲದ ವೇಳೆ ಜೆಸಿಬಿ ಮೂಲಕ ಮನೆಯ ಪಂಚಾಂಗದ ಸಮೀಪದ ಮಣ್ಣನ್ನು ಅಗೆಯಲಾಗಿದೆ ಎನ್ನಲಾಗಿದೆ. ಇದರಿಂದ ಮನೆಯ ಅಡಿಪಾಯಕ್ಕೆ ಅಪಾಯ ಎದುರಾಗಿದ್ದು, ಭಾರಿ ಮಳೆಯಾದಲ್ಲಿ ಮನೆ ಕುಸಿಯುವ ಆತಂಕವಿದೆ ಎಂದು ರೊಜಾರಿಯೋ ತಿಳಿಸಿದರು.
ಘಟನೆ ಬಳಿಕ ಸಮೀಪದ ಕೂಳ ಫ್ರೆಂಡ್ಸ್ ಕ್ಲಬ್ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಜೆಸಿಬಿಯೊಂದು ಜೋಯ್ ಅವರ ಮನೆ ಕಡೆಗೆ ತೆರಳಿರುವುದು ಕಂಡುಬಂದಿದೆ ಎನ್ನಲಾಗಿದೆ.
ದಯಾನಂದ ಶೆಟ್ಟಿ ವಿರುದ್ಧ ಆರೋಪ ಜೆಸಿಬಿ ಚಾಲಕನನ್ನು ವಿಚಾರಿಸಿದಾಗ, ದಯಾನಂದ ಶೆಟ್ಟಿ ಎಂಬವರು ಹಣ ನೀಡಿ ಮನೆ ಬಳಿಯ ಜಾಗವನ್ನು ಅಗೆಯುವಂತೆ ಸೂಚಿಸಿದ್ದರಿಂದ ತಾನು ಕೆಲಸ ಮಾಡಿದ್ದಾಗಿ ಹೇಳಿರುವುದಾಗಿ ರೊಜಾರಿಯೋ ಆರೋಪಿಸಿದರು. ಈ ಸಂಬಂಧದ ಆಡಿಯೋ ಹಾಗೂ ವಿಡಿಯೋ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದರು.
ಪೊಲೀಸರ ವಿರುದ್ಧವೂ ಆರೋಪ : ಕನ್ನಡ ಓದಲು ಹಾಗೂ ಬರೆಯಲು ಬಾರದ ಜೋಯ್ ದಂಪತಿ ಘಟನೆ ಬಳಿಕ ಕಾವೂರು ಪೊಲೀಸ್ ಠಾಣೆಗೆ ತೆರಳಿ ಮೌಖಿಕವಾಗಿ ದೂರು ನೀಡಿದ್ದರು. ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸದೆ ಸಣ್ಣ ಪ್ರಕರಣದಂತೆ ದೂರು ದಾಖಲಿಸಲಾಗಿದೆ ಹಾಗೂ ಸ್ಥಳಕ್ಕೆ ಬಂದ ಪೊಲೀಸರು ತಮ್ಮನ್ನು ಬೆದರಿಸಿದ್ದಾರೆ ಎಂದು ಜೋಯ್ ಆರೋಪಿಸಿದ್ದಾರೆ.
ಮನೆಯ ಕಂಪೌಂಡ್ ಮತ್ತು ಸಾರ್ವಜನಿಕ ಕಾಲುವೆಯ ನಡುವೆ ಸ್ಪಷ್ಟವಾದ ಗಡಿ ಇದ್ದು, ಇದು ಕೇವಲ ಗಡಿ ವಿವಾದದ ಪ್ರಕರಣವಲ್ಲ ಎಂದು ರೊಜಾರಿಯೋ ಹೇಳಿದ್ದಾರೆ. ಮನೆಗೆ ಹಾನಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕ ಕಾಲುವೆಗೂ ಹಾನಿಯಾಗಿದೆ ಎಂಬ ಆರೋಪವೂ ಕೇಳಿಬಂದಿದೆ.ಪೊಲೀಸ್ ಕಮಿಷನರ್ಗೆ ದೂರು ಘಟನೆ ಕುರಿತು ಪೊಲೀಸ್ ಕಮಿಷನರ್ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಆದರೆ ಈವರೆಗೆ ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ರೊಜಾರಿಯೋ ದೂರಿದ್ದಾರೆ.
ನಗರದ ಅಭಿವೃದ್ಧಿಯ ಹೆಸರಿನಲ್ಲಿ ಸಾಮಾನ್ಯ ಜನರ ಜಾಗಗಳನ್ನು ಕಬಳಿಸುವ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು. ಪ್ರಕರಣವನ್ನು ಕೇವಲ ‘ಸಿವಿಲ್ ವಿವಾದ’ ಎಂದು ಪರಿಗಣಿಸದೆ, ಮನೆಗೆ ಹಾನಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ರಾಬರ್ಟ್ ರೊಜಾರಿಯೋ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿ.ಜೆ. ಜೋಯ್, ಲಿಜಿಮೋಲ್, ಜೋನ್ ಕೆ.ಜೆ., ಗೋಪಾಲ್ ಪೂಜಾರಿ, ಥಾಮಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

