ಬಂಟ್ವಾಳ : ಅನಂತಾಡಿ ಗ್ರಾಮದ ನಡುಮನೆ, ಸುದೆಕಟ್ಟೆಮಾರ್ ಹಾಗೂ ಪೂಂಜಾವು ಪ್ರದೇಶದ 50ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಸಾರ್ವಜನಿಕರು ಸಂಚರಿಸುವ ದಾರಿಯನ್ನು ಮುಚ್ಚಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಬಾಬಣಕಟ್ಟೆ ಸರ್ವೆ ನಂಬರ್ 137ರ ದಾರಿಯನ್ನು ಗ್ರಾಮಸ್ಥರು ಅನಾದಿಕಾಲದಿಂದಲೂ ಬಳಸಿಕೊಂಡು ಬರುತ್ತಿದ್ದು, ಈ ದಾರಿಯ ಮೂಲಕ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೈರಿ, ಅಂಚೆ ಕಚೇರಿ ಹಾಗೂ ಬೀಡಿ ಬ್ರಾಂಚ್‌ಗೆ ಜನರು ಸಂಚರಿಸುತ್ತಿದ್ದಾರೆ. ದಾರಿ ಮುಚ್ಚಿರುವುದರಿಂದ ಶಾಲಾ ಮಕ್ಕಳು, ವೃದ್ಧರು, ಕೆಲಸಕ್ಕೆ ತೆರಳುವವರು ಸೇರಿದಂತೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಅಂಚೆ ಕಚೇರಿಗೆ ತೆರಳುವುದಕ್ಕೂ, ಹಾಲಿನ ಡೈರಿಗೆ ಹೋಗುವುದಕ್ಕೂ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ದಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಬಂಟ್ವಾಳ ತಾಲೂಕು ತಹಶೀಲ್ದಾರರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

