Tuesday, September 8, 2026
Homeಜಿಲ್ಲೆಮಂಗಳೂರು : ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಗಣೇಶೋತ್ಸವ: ಸೆ.14ರಿಂದ ಮೂರು ದಿನಗಳ ಸಂಭ್ರಮ.

ಮಂಗಳೂರು : ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಗಣೇಶೋತ್ಸವ: ಸೆ.14ರಿಂದ ಮೂರು ದಿನಗಳ ಸಂಭ್ರಮ.

ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಸೆಪ್ಟೆಂಬರ್ 14ರಿಂದ 16ರವರೆಗೆ ಮಂಗಳೂರಿನ ಬಂಟ್ಸ್ ಹಾಸ್ಟೇಲ್‌ನ ‘ಓಂಕಾರ ನಗರ’ದಲ್ಲಿ ನಡೆಯಲಿದೆ ಎಂದು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದ್ದಾರೆ.

ಸೆ.13ರಂದು ವಿಗ್ರಹದ ಬರಮಾಡಿಕೊಳ್ಳುವಿಕೆ ಸೆಪ್ಟೆಂಬರ್ 13ರಂದು ಸಂಜೆ 5 ಗಂಟೆಗೆ ಶರವು ದೇವಸ್ಥಾನದ ಬಳಿಯ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಬಳಿಕ ಶ್ರೀ ರಾಮದಾಸ್ ಆಚಾರ್ಯರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ಓಂಕಾರ ನಗರಕ್ಕೆ ಬರಮಾಡಿಕೊಳ್ಳಲಾಗುವುದು.

ಸೆ.14: ಗಣೇಶೋತ್ಸವಕ್ಕೆ ಚಾಲನೆ : ಸೆಪ್ಟೆಂಬರ್ 14ರಂದು ಬೆಳಗ್ಗೆ 8 ಗಂಟೆಗೆ ಸ್ಥಳಶುದ್ಧಿ ಹಾಗೂ ಮೂರ್ತಿ ಪ್ರತಿಷ್ಠೆ, ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, ಗಣೇಶೋತ್ಸವ ಉದ್ಘಾಟನೆ ಮತ್ತು ತೆನೆ ವಿತರಣೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಪಾಂಚಜನ್ಯ ಪ್ರತಿಷ್ಠಾನ ಕುಡ್ಲದ ಕಲಾವಿದರಿಂದ ‘ಶ್ರೀ ಮಂಗಳಪುರದ ಮಂಗಳಾಂಬಿಕೆ’ ಪೌರಾಣಿಕ ನೃತ್ಯನಾಟಕ ಪ್ರದರ್ಶನಗೊಳ್ಳಲಿದೆ.

ಸಂಜೆ 5ರಿಂದ 7ರವರೆಗೆ ಧಾರ್ಮಿಕ ಸಭೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನಡೆಯಲಿದೆ. ರಾತ್ರಿ 7.30ರಿಂದ ರಂಗಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ರಾತ್ರಿ 8ರಿಂದ ‘ಬಂಟಕಲಾ ಸಂಗಮ-2026’ ಅಂಗವಾಗಿ ವಿವಿಧ ಬಂಟರ ಸಂಘಗಳಿಂದ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.

ಸೆ.15: ಮೂಡಪ್ಪ ಸೇವೆ, ಮಹಾಗಣಯಾಗದ ಪೂರ್ವ ವಿಧಿವಿಧಾನ ಸೆಪ್ಟೆಂಬರ್ 15ರಂದು ಬೆಳಗ್ಗೆ 11.30ರಿಂದ ಮೂಡಪ್ಪ ಸೇವೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 4ರಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗದ ಅಂಗವಾಗಿ ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಭೂಶುದ್ಧಿ, ವಾಸ್ತು ರಾಕ್ಷೋಹವನ, ಮಹಾಪೀಠದಲ್ಲಿ ಕಲಶ ಸ್ಥಾಪನೆ ಹಾಗೂ ಸೇವಾರ್ಥಿಗಳಿಂದ ಸಂಕಲ್ಪ ನೆರವೇರಲಿದೆ.

ಸಂಜೆ 5ರಿಂದ 7ರವರೆಗೆ ಧಾರ್ಮಿಕ ಸಭೆ ಮತ್ತು ಸಾಧಕರಿಗೆ ಸನ್ಮಾನ ನಡೆಯಲಿದೆ. ರಾತ್ರಿ 7.30ರಿಂದ ಹೂವಿನ ಪೂಜೆ, ರಂಗಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ರಾತ್ರಿ 8ರಿಂದ ಸ್ವರಲಯ ಸಿಂಫನಿ ಕಲಾಶಾಲೆ ವತಿಯಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ.

ಸೆ.16: ಮಹಾಗಣಯಾಗ, ಅನ್ನಸಂತರ್ಪಣೆ, ಭವ್ಯ ಶೋಭಾಯಾತ್ರೆ : ಸೆಪ್ಟೆಂಬರ್ 16ರಂದು ಬೆಳಗ್ಗೆ 8.30ರಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸಂಜೆ 3.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ವಿಸರ್ಜನ ಪೂರ್ವ ಪೂಜೆ ನಡೆಯಲಿದ್ದು, ಬಳಿಕ ಓಂಕಾರ ನಗರದಿಂದ ಗಣೇಶ ವಿಗ್ರಹದ ಭವ್ಯ ಶೋಭಾಯಾತ್ರೆ ಆರಂಭವಾಗಲಿದೆ.

ಶೋಭಾಯಾತ್ರೆಯು ಬಂಟ್ಸ್ ಹಾಸ್ಟೇಲ್ ಸರ್ಕಲ್ → ಪಿ.ವಿ.ಎಸ್. ವೃತ್ತ → ನ್ಯೂ ಚಿತ್ರಾ ಟಾಕೀಸ್ → ರಥಬೀದಿ → ವೆಂಕಟರಮಣ ದೇವಸ್ಥಾನದ ರಸ್ತೆ ಮೂಲಕ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆಗೊಳ್ಳಲಿದೆ. ಜಿಲ್ಲೆಯ ವಿವಿಧ ಭಜನಾ ತಂಡಗಳು ಶೋಭಾಯಾತ್ರೆಯಲ್ಲಿ ಭಜನಾ ಸೇವೆ ಸಲ್ಲಿಸಲಿದ್ದು, ಮೂರು ದಿನಗಳ ಗಣೇಶೋತ್ಸವದ ಸಂದರ್ಭದಲ್ಲೂ ವಿವಿಧ ಭಜನಾ ತಂಡಗಳಿಂದ ವೇದಿಕೆಯಲ್ಲಿ ಭಜನಾ ಸೇವೆ ನಡೆಯಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುಂಚಮೆ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ರವಿರಾಜ್ ಶೆಟ್ಟಿ ಹಾಗೂ ಡಾ. ಆಶಾಜ್ಯೋತಿ ರೈ ಬಂಬ್ರಾಣ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಹಾಗೂ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular