ಪುತ್ತೂರು : ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಬಟ್ಟೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಸೆ.2ರಂದು ಬೆಳಗ್ಗೆ ವಿದ್ಯಾರ್ಥಿನಿಯರ ಬಟ್ಟೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ನಿಲಯದ ಮೇಲ್ವಿಚಾರಕಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಕ್ಯಾಮರಾ ಪರಿಶೀಲಿಸಿದಾಗ, ಅಪರಿಚಿತ ಯುವಕನೋರ್ವ ಬೆಳಗಿನ ಜಾವ ವಿದ್ಯಾರ್ಥಿನಿಲಯಕ್ಕೆ ನುಗ್ಗಿ ಬಟ್ಟೆಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದು ಪತ್ತೆಯಾಗಿತ್ತು.
ಈ ಕುರಿತು ಸೆ.5ರಂದು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 54/2026, ಕಲಂ 331(4), 305 BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪುತ್ತೂರು ಕೊಳ್ತಿಗೆ ನಿವಾಸಿ ಕೆ. ರಾಮಚಂದ್ರ (35) ಎಂಬಾತನನ್ನು ಸೆ.7ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಸೆ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

